Will to Live

ಮೊನ್ನೆ ನನ್ನ ಮಗನಿಗೆ ಹಿಂದಿ ಪಾಠ ಹೇಳಿಕೊಡಬೇಕಾಗಿತ್ತು. ಅವನಿಗೆ ಹಿಂದಿ ಎಂದರೆ ತುಂಬಾ ‘ಇಷ್ಟ’ 😉
ಹಾಗಾಗಿ ನಾನು ಅವನ ಹಿಂದಿಪಾಠಗಳನ್ನು ಮೊದಲು ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ‘ಅನೌಖೀ ಕಲಾಕೃತಿ’ (अनोखी कलाकृति) ಎಂಬ ಒಂದು ಗದ್ಯಪಾಠ ನನ್ನ ಮನಸ್ಸು ಮುಟ್ಟಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸ್ತು…

ಈ ಘಟನೆ ಹಿಮಾಚಲ ಪ್ರದೇಶದಲ್ಲಿರುವ ಒಂದು ಕಲಾಶಾಲೆಯಲ್ಲಿ ನಡೆದಿರುತ್ತದೆ. ಅಲ್ಲಿ ಅಭ್ಯಸಿಸುತ್ತಿರುವ ಇಬ್ಬರು ಗೆಳೆತಿಯರು, ಪ್ರೀತಿ ಹಾಗೂ ಮೈತ್ರಿ ಮತ್ತು ಒಬ್ಬ ವೃದ್ಧ ಕಲಾವಿದ ಈ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು.
ಈ ಮೂವರು ‘ಕಲೆಯೇ ದೇವರು’ ಎಂಬ ಭಾವನೆ ಇಟ್ಟುಕೊಂಡವರು. ವೃದ್ಧ ಕಲಾವಿದರು ಪ್ರೀತಿ ಹಾಗೂ ಮೈತ್ರಿ ಯರನ್ನು ತಮ್ಮ ಮಕ್ಕಳಂತೇ ನೋಡುತ್ತಿರುತ್ತಾರೆ. ಅವರ ಒಂದು ಮಹದಾಶೆ ಎಂದರೆ ತಮ್ಮ ಜೀವಿತಾವಧಿಯಲ್ಲಿ ಒಂದು ಮಹಾನ್ ಕಲಾಕೃತಿ ರಚಿಸಬೇಕು ಎಂಬುದು.

ಹೀಗೇ ಚಳಿಗಾಲ ಬರುತ್ತದೆ; ಚಳಿ, ಮಂಜು ಸುರಿಯಲು ಪ್ರಾರಂಭವಾಗುತ್ತದೆ. ಪ್ರೀತಿ ನ್ಯೂಮೋನಿಯದಿಂದ ಹಾಸಿಗೆ ಹಿಡಿದು ಬಿಡುತ್ತಾಳೆ. ಚಳಿ ತೀವ್ರವಾಗಿದ್ದ ಕಾರಣ ಸುಮಾರು ದಿನಗಳು ಕಳೆದರೂ ಅವಳು ಚೇತರಿಸಿಕೊಳ್ಳಲು ಆಗುವುದಿಲ್ಲ. ಅನಾರೋಗ್ಯ ಹಾಗೂ ಚಳಿಗಾಲದ ವಾತಾವರಣ ಅವಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಹಾಸಿಗೆಯಲ್ಲಿ ಮಲಗಿ ಕೋಣೆಯ ಕಿಟಕಿಯ ಆಚೆ ನೋಡುತ್ತಿರುತ್ತಾಳೆ. ಬೆರಳೆಣಿಕೆಯಷ್ಟು ಎಲೆಗಳು ಉಳಿದಿರುವ ಒಂದು ಗಿಡ ಇವಳ ಕಣ್ಣಿಗೆ ಬೀಳುತ್ತದೆ. ಅಂದಿನಿಂದ ಉಳಿದಿರುವ ಎಲೆಗಳನ್ನು ಎಣಿಸುವುದಕ್ಕೆ ಪ್ರಾರಂಭ ಮಾಡುತ್ತಾಳೆ. ಮೈತ್ರಿಯು ಏಕೆಂದು ಕೇಳಿದಾಗ ‘ಈ ಮರದ ಕೊನೆ ಎಲೆ ಬೀಳುವುದರ ಜೊತೆಗೇ ನನ್ನ ಜೀವನ ಮುಗಿಯುತ್ತದೆ ಅನ್ನಿಸುತ್ತದೆ’ ಎನ್ನುತ್ತಾಳೆ!!
ಇವಳನ್ನು ನೋಡಲು ಬರುತ್ತಿದ್ದ ವೈದ್ಯರು ಮೈತ್ರಿಯನ್ನು ಕರೆದು, ‘ನಿನ್ನ ಸ್ನೇಹಿತೆ ದಿನೇ ದಿನೇ ಕೃಶಳಾಗುತ್ತಿದ್ದಾಳೆ. ನಾನು ಮಾಡುವ ಪ್ರಯತ್ನವನ್ನೆಲ್ಲ ಮಾಡಿದ್ದೇನೆ. ಅವಳ ಮನೋಸ್ಥೈರ್ಯ ವನ್ನು ಹೆಚ್ಚಿಸಲು ಪ್ರಯತ್ನ ಮಾಡು’ ಎಂದು ಹೇಳುತ್ತಾರೆ.
ತನ್ನ ಸ್ನೇಹಿತೆಯ ಅವಸ್ಥೆಯನ್ನು ನೋಡಿ ತುಂಬಾ ನೊಂದ ಮೈತ್ರಿ, ಪ್ರೀತಿಗೆ ಧೈರ್ಯ ತುಂಬಲು, ಧನಾತ್ಮಕ ಚಿಂತನೆ ಮಾಡುವಂತೆ ಮಾಡಲು ಶತ ಪ್ರಯತ್ನ ಮಾಡುತ್ತಾಳೆ. ಚಳಿಗಾಲದಲ್ಲಿ ಮರ-ಗಿಡಗಳ ಎಲೆಗಳು ಉದುರುವುದು ಸಹಜ; ಅದಕ್ಕೂ ನಿನ್ನ ಜೀವನಕ್ಕೂ ಏನೂ ಸಂಬಂಧವಿಲ್ಲ ಎಂದೆಲ್ಲಾ ಹೇಳುತ್ತಾಳೆ. ಏನೂ ಪ್ರಯೋಜನವಾಗುವುದಿಲ್ಲ. ಈ ವಿಷಯವೆಲ್ಲ ಅವರ ತಂದೆಯಂತೆ ವಾತ್ಸಲ್ಯ ತೋರುತ್ತಿದ್ದ ವೃದ್ಧ ಕಲಾವಿದರಿಗೆ ತಿಳಿಯುತ್ತದೆ. ಅವರು ಇವರಿಬ್ಬರಿಗೆ ಧೈರ್ಯ ನೀಡಿ ಮಲಗಲು ಹೇಳಿ ಹೋಗುತ್ತಾರೆ.

ಮಾರನೇ ದಿನ ಬೆಳಗ್ಗೆ ಪ್ರೀತಿ ಕಣ್ಣುಬಿಡುತ್ತಾಳೆ; ಕಿಟಕಿಯಾಚೆಗಿನ ಒಂದೇ ಎಲೆ ಉಳಿದಿರುವ ಮರವನ್ನು ನೋಡಿ ಖಿನ್ನತೆಗೆ ಒಳಗಾಗುತ್ತಾಳೆ. ಗಾಳಿ ಯು ಜೋರಾಗಿ ಬೀಸುತ್ತಿರುತ್ತದೆ; ಆ ಎಲೆ ಯಾವುದೇ ಘಳಿಗೆಯಲ್ಲಿ ಬೀಳುವ ಹಾಗಿರುತ್ತದೆ. ವೇದನೆಯಿಂದ ಕಣ್ಮುಚ್ಚಿ ಮಲಗುತ್ತಾಳೆ. ಸುಮಾರು ಹೊತ್ತಾದ ನೋಡಿದರೆ ಆ ಎಲೆ ಹಾಗೇ ಗಿಡದ ಮೇಲೇ ಇದೆ!!
ಇನ್ನೂ ಒಂದು ದಿನ ಆಗುತ್ತದೆ. ಎಲೆ ಬಿದ್ದಿಲ್ಲ. ಪ್ರೀತಿ ಅತೀವ ಸಂತೋಷದಿಂದ ತನ್ನ ಸ್ನೇಹಿತೆಯನ್ನು ಕರೆದು, ‘ನೋಡು ಮೈತ್ರಿ, ಆ ಮರದ ಕೊನೇ ಎಲೆ ಇನ್ನೂ ಬಿದ್ದಿಲ್ಲ. ನಾನಿನ್ನೂ ಬದುಕಬೇದು, ಸಾಧನೆ ಮಾಡಬೇಕು ಎಂದು ದೇವರೇ ನನಗೆ ಆ ಎಲೆಯ ಮೂಲಕ ಸಂದೇಶ ಕಲಿಸುತ್ತಿದ್ದಾನೆ ಎಂದೆನಿಸುತ್ತಿದೆ. ಚಿತ್ರ ಬರೆಯುವ ಮನಸ್ಸಾಗುತ್ತಿದೆ; ಸಲಕರಣೆಗಳನ್ನು ದಯವಿಟ್ಟು ತಂದುಕೊಡು’ ಎನ್ನುತ್ತಾಳೆ. ಖುಷಿಯಾದ ಮೈತ್ರಿ ಅವಳ ಜೊತೆ ಕುಳಿತು ಚಿತ್ರ ರಚಿಸುವುದಲ್ಲಿ ಸಹಾಯ ಮಾಡುತ್ತಾಳೆ. ಹೀಗೇ ದಿನೇ ದಿನೇ ಪ್ರೀತಿ ಮತ್ತೆ ಆರೋಗ್ಯವಂತಳಾಗಿ ಮೊದಲಿನಂತಾಗುತ್ತಾಳೆ.

ಒಂದು ದಿನ ಈ ಗೆಳತಿಯರು ಒಂದೇ ಎಲೆ ಇದ್ದ ಗಿಡವನ್ನು ನೋಡುತ್ತಾರೆ. ಆ ಒಂದು ಎಲೆ ಇನ್ನೂ ನಳನಳಿಸುತ್ತಿದೆ. ಅಚ್ಚರಿಯಿಂದ ಆಚೆ ಬಂದು ನೋಡಿದಾಗ, ಅದು ಮರಕ್ಕೆ ಅಂಟಿಕೊಂಡಿರುವಂತೆ ಇರುವ, ನೈಜತೆಯನ್ನು ಮೀರುವ ಒಂದು ಎಲೆಯ ಚಿತ್ರ!! ಅದು ಬಿಟ್ಟರೆ ಆ ಮರದಲ್ಲಿ ಇನ್ನೊಂದು ಎಲೆ ಇಲ್ಲ.

ಅವರ ಹಿಂದೆಯೇ ಬಂದ ವೃದ್ಧ ಕಲಾವಿದರು ಇವರನ್ನು ನೋಡಿ, ನಸುನಕ್ಕು, ‘ಇದೇ ನಾನು ಬರೆದ ಅಪೂರ್ವ ಕಲಾಕೃತಿ’ ಎಂದೆನ್ನುತ್ತಾ ಅವರಿಬ್ಬರನ್ನು ಮಮತೆಯಿಂದ ಆಲಂಗಿಸುತ್ತಾರೆ.

ಇಷ್ಟು ಆ ಹಿಂದಿ ಗದ್ಯಪಾಠದ ಸಾರಾಂಶ. ಇದನ್ನು ಓದಿ ನನಗನ್ನಿಸಿದ್ದು…

  • ಮನಸ್ಸು ನಮ್ಮ ಮಿತ್ರ / ಶತ್ರು ಆಗಬಹುದು. ಋಣಾತ್ಮಕ ಚಿಂತನೆ (negative thinking) ಮನುಷ್ಯನನ್ನು ಕುಗ್ಗಿಸಿಬಿಡುತ್ತದೆ. ಮನೋಸ್ಥೈರ್ಯ ಬಹಳ ಮುಖ್ಯ.
  • ಇನ್ನೊಬರಿಗೆ ಸಹಾಯ ಮಾಡುವುದರಲ್ಲಿ ದೇವರನ್ನು ಕಾಣಬಹುದು.
  • ಬೇರೆಯವರಿಗೆ ಅಗತ್ಯವಿದ್ದ ಸಮಯದಲ್ಲಿ ನೀಡುವ ನೆರವು (ಸಮಾಧಾನ ತರುವ / ಧೈರ್ಯ ತುಂಬುವ ಮಾತುಗಳೇ ಏಷ್ಟೋ ಸಲ ಎಲ್ಲಕ್ಕಿಂತ ಮಿಗಿಲಾಗಿರುತ್ತದೆ) ಯಾವ ಸಾಧನೆಗಿಂತ ದೊಡ್ಡದು.

ನನಗನ್ನಿಸಿದ್ದು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ… 😊

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s