ನಾನು ನಾಯಿ ಕೈಯಲ್ಲಿ ಕಚ್ಚಿಸ್ಕೊಳ್ಲಿಲ್ಲ . . . !?!☺
ನಾನು, ಮನ್ನೆ ದಿನ, ಸಾಯಂಕಾಲ ಎಂದಿನಂತೆ ನನ್ನ ವಾಯು ವಿಹಾರ ಮುಗಿಸಿಕೊಂಡು, ತರಕಾರಿ ಚೀಲ ಹಿಡಿದುಕೊಂಡು ಮನೆಗೆ ಬಂದಾಗ ಸ್ವಲ್ಪ ತಡವಾಗಿತ್ತು. ಬಂದ ಕೂಡಲೆ ನಮ್ಮ ರತ್ನ – ರೀ ನಿಮ್ಮ ಸ್ನೇಹಿತ ಭದ್ರಾವತಿ ಚಿದಂಬರ ನಾಯಿ ಕೈಲಿ ಕಚ್ಚಿಸ್ಕೊಂಡ್ರಂತೆ. ಇಂಜೆಕ್ಷನ್ ತಗೋತಿದಾರಂತೆ. ಸುಶೀಲಾ phone ಮಾಡಿದ್ರು ಅಂತಂದ್ಳು. ಅಯ್ಯೋ ಪಾಪ ಅನಿಸ್ತು. ತಕ್ಷಣ ಫೋನಾಯಿಸಲಾಗಲಿಲ್ಲ. ಮಾರನೇದಿನ ಫೋನಾಯಿಸಿದೆ.
ಹಲೋ . . . ಚಿದಂಬರ, ಹೇಗಿದೀಯ. ನಾಯಿ ಕೈಲಿ ಕಚ್ಚಿಸ್ಕೊಂಡ್ಯಂತೆ !! ಅಂದೆ.
ಹಲೋ ನಿಂಗ್ಯಾರೋ ಸುಳ್ಳು ಹೇಳಿರ್ಬೇಕು. ನಾನು ನಾಯಿ ಕೈಲಿ ಕಚ್ಚಿಸ್ಕೊಳ್ಲಿಲ್ಲ ಅಂತಂದ. ನನಗೆ ನಮ್ಮ ರತ್ನಳ ಮೇಲೆ ಸಿಟ್ಟು ಬಂತು. ಮನಸ್ನಲ್ಲೇ, ಈ ಹೆಂಗಸರೇ ಹೀಗೆ. ಸರಿಯಾಗಿ ತಿಳಿದು ಕೊಳ್ದೇ ಏನೇನೋ ಹೇಳಿ ಬಿಡ್ತಾರೆ ಅಂದ್ಕೊಂಡು ಹಾಗೂ ಮತ್ತೆ ಕೇಳ್ದೆ. ಇಂಜೆಕ್ಷನ್ ಕೂಡ ತಗೋತಿದೀಯ ಅಂತ ಸುಶೀಲಾ phone ಮಾಡಿದ್ರು ಅಂದ್ರು, ಅದಕ್ಕೇ ಕೇಳ್ದೆ. ಸಾರಿ, ನಮ್ಮ ,ರತ್ನ ತಪ್ಪಾಗಿ ಹೇಳಿರ್ಬೇಕು. ಸಾರಿ ಅಂತಂದೆ.
ಹಲೋ, ಹಾಗೇನಿಲ್ಲ ಅವರು ಹೇಳಿರೋದ್ರಲ್ಲಿ ಅರ್ಧ ಸತ್ಯ ಅರ್ಧ ಸುಳ್ಳು ಅಂತಂದ. ಇಂಜೆಕ್ಷನ್, ಮಾತ್ರೆ ಎಲ್ಲಾ ತಗೋತಿರೋದು ನಿಜ. ಆದ್ರೆ ನಾನು ನಾಯಿ ಕೈಲಿ ಕಚ್ಚಿಸ್ಕೊಳ್ಲಿಲ್ಲ.
ಹೀಗೇ ಸಂಜೆ ವಾಕ್ ಮುಗುಸ್ಕೊಂಡ್ ಬರ್ತಾ ಇದ್ದೆ. ಕತ್ಲೆಯಾಗಿತ್ತು. ಕರೆಂಟ್ ಬೇರೆ ಹೋಗಿತ್ತು. ಬೀದಿ ದೀಪಾನೂ ಇರ್ಲಿಲ್ಲ, torch ಕೂಡ ತಗೊಂಡ್ ಹೋಗಿರ್ಲಿಲ್ಲ. ಯಾವುದೋ ಬೀದಿ ನಾಯಿ ಹಿಂದಿನಿಂದ ಬಂದು ಕಚ್ಚಿ ಬಿಡ್ತು. ನಾನ್ಯಾಕೆ ಅದರ ಹತ್ರ ಹೋಗಿ ಕಚ್ಚಿಸಿಕೊಳ್ಲಿ ಹೇಳು ಅನ್ನೋದೇ !!!
ನಾನಂತೂ ಸುಸ್ತು…