Existence of God (Author: RamaMurthy)

ದೇವರಿದ್ದಾನೆಯೇ?

ಈ ಪಶ್ನೆ ಕೆಲವು ವರ್ಷಗಳ ಕೆಳಗೆ, ಕೆಲವು ವರ್ಷಗಳೇನು ಹತ್ತಾರು ವರ್ಷಗಳ ಕೆಳಗೆ ನಾವೆಲ್ಲಾ ಸ್ನೇಹಿತರು ಒಟ್ಟಿಗೆ ಸೇರಿದ್ದಾಗ ಉದ್ಭವಿಸಿದ್ದು. ಇಲ್ಲಿ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ (ಈಗ ಇಬ್ಬರೂ ದಿವಂಗತರಾಗಿದ್ದಾರೆ) ಭಾಗಿಯಾಗಿದ್ದರು. ನಾವೂ ಚಿದಂಬರ ಶಾಲಾ ಸಹಪಾಠಿ ಗಳು ಹೇಗೋ, ಹಾಗೇ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ ಶಾಲಾ ಸಹಪಾಠಿಗಳು ಆತ್ಮೀಯರು.

ಹೀಗೇ, ಏನೇನೋ ಹರಟುತ್ತಿದ್ದಾಗ, ಪೂಜೆ, ಪುನಸ್ಕಾರಗಳ ಪ್ರಸ್ತಾವನೆ ಬಂದಾಗ ಈ ಪ್ರಶ್ನೆ ಬಂತು. ಪ್ರಶ್ನೆ ಎತ್ತಿದವನು ನಮ್ಮ ಚಿದಂಬರ. ನಮ್ಮ ತಾಯಿಯವರ ವಾದ ಸರಣಿ ಒಂದು ದಿಕ್ಕಿನಲ್ಲಿ ಸಾಗಿದ್ದರೆ, ನಮ್ಮ ಚಿದಂಬರನ ತಾಯಿಯವರ ವಾದಸರಣಿ ಮತ್ತೊಂದು ದಿಕ್ಕಿನಲ್ಲಿತ್ತಾದರೂ ಸ್ವಲ್ಪ ಪೂರಕ ವಾಗಿತ್ತು. ಎಷ್ಟಾದರೂ ಇವರು, ಆಧ್ಯಾತ್ಮಕ ಚಿಂತಕರೂ, ಸಾಕಷ್ಟು ಓದಿಕೊಂಡವರು. ಇರಲಿ, ವಾದ ಸಂವಾದ ಆಸಕ್ತಿದಾಯಕವೂ, ಆನಂದದಾಯಕವೂ ಆಗಿತ್ತು. ಅವರಿಬ್ಬರೇ ಅಲ್ಲಿ ಹಿರಿಯವರು. ಹಿರಿಯವರ ವಾದ ಸರಣಿ ಹೇಗಿರುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದಂತಿತ್ತು. ಎಲ್ಲವನ್ನೂ ಹೇಳಬೇಕು ಅನ್ನಿಸುತ್ತಿದೆಯಾದರು, ತುಂಬಾ ಉದ್ದವಾಗಿ ಬಿಡುತ್ತೆ. ಪ್ರಶ್ನೆಗೆ ಪೂರಕ ವಾದ್ದನ್ನು ಸ್ವಲ್ಪ ಮಾತ್ರ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ. (ಆಡುಭಾಷೆ ಯನ್ನು ಸ್ವಲ್ಪ ಬದಲಾಯಿಸಿದ್ದೇನೆ) .

ಚಿದಂಬರನ ತಾಯಿ : ನಿನಗೆ ಈ ಪ್ರಶ್ನೆ ಈಗ ಯಾಕೆ ಬಂತು ?

ಚಿದಂಬರ : ಪೂಜೆ, ಪುನಸ್ಕಾರಗಳು ನಮಗೋಸ್ಕರವೋ, ದೇವರಿಗೋಸ್ಕರವೋ ಈ ಸಂದಿಗ್ಧತೆಯಲ್ಲಿ ಈ ಪ್ರಶ್ನೆ.

ನಮ್ಮ ತಾಯಿಯವರು: ನಮಗೋಸ್ಕರ, ದೇವರ ಹೆಸರಿನಲ್ಲಿ ಅಷ್ಟೇ. ಆ ಭಗವಂತ, ಸೃಷ್ಟಿಕರ್ತ – ಆದಿಶಕ್ತಿ ಅವನಿಗೆ ನೀನು ಏನನ್ನು ಕೊಡಬಲ್ಲೆ.

ಚಿದಂಬರ : ಹಾಗಿದ್ರೆ ಪೂಜೆ,ಪುನಸ್ಕಾರ, ಹೋಮ ಹವನ ಇತ್ಯಾದಿ ದೇವರ ಹೆಸರಿನಲ್ಲಿ ಮಾಡಿದ್ರೆ ನಮಗೆ ಬೇಕಾದ್ದೆಲ್ಲಾ ಸಿಗುತ್ತೆ ಅಂತ ಅರ್ಥವೇ?

ನಮ್ಮ ತಾಯಿಯವರು: ದೇವ್ರು ನಮಗೆ ಎಲ್ಲವನ್ನು ಎಷ್ಟುಬೇಕೋ ಅಷ್ಟು ಕೊಟ್ಟೆ ಇರ್ತಾನೆ. ಇನ್ನೂ ಹೆಚ್ಚು ಬೇಕಾದ್ರೆ ನಾವೇ ಸಂಪಾದಿಸ್ಕೊ ಬೇಕು. ಅದು ಸಾದ್ಯವೂ ಆಗಬಹುದು. ಅದಕ್ಕೆ ಪ್ರಯತ್ನ ಅಂತೂ ಪಡಲೇ ಬೇಕಲ್ವಾ? ಪೂಜೆ, ಪುನಸ್ಕಾರ, ಹೋಮ ಹವನ ಇತ್ಯಾದಿ ಮಾಡಿದಾಗ ಗುಣಾತ್ಮಕ ಶಕ್ತಿ ಪೂರೈಕೆ ಆಗುತ್ತೆ ಅಂತ ಕೇಳಿದೀನಿ. ಪ್ರಯತ್ನ ಪಡೋದ್ರಲ್ಲಿ ತಪ್ಪೇನಿದೆ. ನಿನ್ನ ಮುಂದಿನ ಪ್ರಶ್ನೆ ನಮಗೆ ಗೊತ್ತು. ಸಿಗದೇ ಹೋದ್ರೆ, ಸಮಯ ದುಡ್ಡು ಎಲ್ಲಾ ವ್ಯರ್ಥ ಅಂತಿಯೇನೋ?. ಹೌದು, ಯಾವುದನ್ನೂ ವ್ಯಯಿಸದೆ ಪಡೆಯಲು ಸಾಧ್ಯವಿಲ್ಲ ಅಲ್ವೇ?. ಒಂದು ತರಹ, ಶಾಂತಿ, ನೆಮ್ಮದಿ ಅಂತೂ ಸಿಗುತ್ತೆ. ನೋಡು, ಈ ಸಂದರ್ಭಗಳಲ್ಲಿ ನಾಲ್ಕಾರು ಜನ ನೆಂಟರು, ಇಷ್ಟರು ಅಂತ ಕರ್ದಿರ್ತೀವಿ. ಎಲ್ಲರು ಒಟ್ಟಿಗೆ ತಿಂಡಿ, ಊಟ, ಹರಟೆ ಅಂತ ಖುಷಿ ಖುಷಿ ಯಾಗಿ ಕಾಲ ಕಳೀತಿವಲ್ವಾ ಎಲ್ಲರು ಸೇರೋದೇ ಒಂದು ಹರ್ಷದಾಯಕ ಕಣೋ. ಹಾಗೆ ಅನ್ಕೋ ನೀನು.

ಚಿದಂಬರನ ತಾಯಿ, ಪದ್ಮ ಏನೇನು ಹೇಳ್ತಾಳೋ ಹೇಳ್ಲಿ ಆಮೇಲೆ ನನ್ನ ಸರದಿ ಅಂದ್ರು. ಅಷ್ಟರಲ್ಲಾಗಲೇ ನಮ್ಮ ಚಿದಂಬರ ಪೂಜೆ ಎಲ್ಲಾ ಸಂಸ್ಕೃತದಲ್ಲೇ ಯಾಕಾಗಬೇಕು ಅಂತ ಶುರು ಮಾಡ್ದ.

ನಮ್ಮ ಅಮ್ಮನ ಅಂಬೋಣ ಹೀಗಿತ್ತು. ಎಲ್ಲವು ದೇವರ ಸೃಷ್ಟಿ ಅಂದ್ಮೇಲೆ, ದೇವರಿಗೆ ಎಲ್ಲಾ ಭಾಷೇನೂ ಗೊತ್ತಿರುತ್ತೆ ಕಣೋ. ನಮಗೆ ಗೊತ್ತಿರ್ಬೇಕಷ್ಟೇ !. ನೀನು ಸಂಸ್ಕೃತ ಬೇಡಾಂದ್ರೆ, ಇಂಗ್ಲಿಷ್ ನಲ್ಲೋ, ಕನ್ನಡದಲ್ಲೋ ಪೂಜೆ ಮಾಡು ಬೇಡಾಂದವರು ಯಾರು. ಬೇಕಾದ್ರೆ ಕಣ್ಣನ್ ರವರನ್ನು ಕರೆಸು. ಅವರು ಕನ್ನಡ ದಲ್ಲೇ ಪೂಜೆ ಮಾಡುಸ್ತಾರೆ. ಚಿದಂಬರನ ತಾಯಿ, ತಿಥಿನೂ ಕನ್ನಡ ದಲ್ಲೇ ಮಾಡುಸ್ತಾರಂತೆ ಕಣೇ ಅಂತ ಸೇರ್ಸಿದ್ರು. ಮಾಡಿಸ್ಲಿ ಬಿಡು. ಹೇಗೋ ಒಂದು, ನಮ್ಮ ಸಂಪ್ರದಾಯ ಉಳಿದ್ರೆ ಸಾಕು.

ಚಿದಂಬರ : ಹಾಗಿದ್ದರೆ ತಿಥಿ, ವಾರ ನಕ್ಷತ್ರ ಅಂತೆಲ್ಲಾ ಯಾಕೆ.? ಹಿರಿಯರ, ತಂದೆ ತಾಯಿಯವರ ತಿಥಿ ಇತ್ಯಾದಿ ಕರ್ಮಗಳನ್ನು ಯಾಕೆ ಆಯಾ ತಿಥಿಯಂದೇ ಮಾಡ್ಬೇಕು? ಮತ್ತೊಂದು ಅಡ್ಡ ಪ್ರಶ್ನೆ.

ನಮ್ಮ ತಾಯಿಯವರು : ನೋಡು, ಯಾವಾಗ ಬೇಕಾದರೂ ಮಾಡಬಹುದು ಅಂದ್ರೆ ನೀನು ಮಾಡುವುದೇ ಇಲ್ಲ. ಮಾಡಿದ್ರಾಯ್ತು ಅಂತ ಮುಂದಕ್ಕೆ ಹಾಕ್ತಾ ಹೋಗ್ತೀಯ. ಅದೇ ಇಂಥಾ ದಿನ, ತಿಥಿ, ವಾರ, ನಕ್ಷತ್ರ ಅಂದ್ರೆ ಆವತ್ತಾದ್ರೂ ಮಾಡ್ತೀಯಾ ಆಲ್ವಾ, ಅದಕ್ಕೇ ಒಂದು ಶಿಸ್ತು, ಬದ್ಧತೆ ಇರಲಿ ಅಂತ.

ನಮ್ಮ ಕಾಲಮಾನದ ಒಂದು ವರ್ಷ ದೇವತೆಗಳಿಗೆ ಒಂದು ದಿವಸಕ್ಕೆ ಸಮ ಅಂತಾನೂ ಹೇಳ್ತಾರೆ. ಅಂದ್ರೆ, ವರ್ಷಕ್ಕೊಂದ್ಸಲ ಅಂದ್ರೂ ದಿವಸಾನು ಊಟಕ್ಕೆ ಹಾಕಿದ ಹಾಗೆ ಕಣೋ ಅಂದ್ರು.

ನಮ್ಮ ಚಿದಂಬರ ಏನೋ ಮತ್ತೆ ಹೇಳಲು ಹೊರಟ. ನಮ್ಮಮ್ಮ , ನೋಡು, ನಿನ್ನ ವಿಜ್ಞಾನದ ಲೆಕ್ಕ ಇಲ್ಲಿ ತರಲು ಹೋಗ್ಬೇಡ. 1ನ್ನ 365 ರಿಂದ ಭಾಗಿಸಿ, ಬೇರೆ ದಿವಸ ಮಾಡಿದ್ರೆ ಎಷ್ಟು ನಿಮಿಷ Late ಆಗಿ ಮಾಡಿದ ಹಾಗಾಗುತ್ತೆ ಅಂತ ಲೆಕ್ಕ ಹಾಕ್ತಿದಿಯ ಅಲ್ವಾ ?. ಆ ಲೆಕ್ಕ ಎಲ್ಲಾ ಪಕ್ಕಕ್ಕೆ ಇಟ್ಕೋ. ವರ್ಷಕ್ಕೊಂದ್ಸಲ ನಾದ್ರೂ ಅಪ್ಪ ಅಮ್ಮನ್ನ ಜ್ಞಾಪಿಸಿಕೊಳ್ಳಲಿ, ಅಂತಲೂ ನಮ್ಮ ಸಮಾಧಾನಕ್ಕೆ ಹೇಳಿರಬಹುದು. ಬ್ರಾಹ್ಮಣರು ಊಟ ಮಾಡೋದನ್ನ ನೋಡಿ, ಅಪ್ಪ ಅಮ್ಮ ಅವರುಗಳೇ ಊಟ ಮಾಡ್ತಿದಾರೆ ಅಂತ ಭಾವಿಸಿ ಸಂತೃಪ್ತಭಾವ ದಿಂದ ನಮಸ್ಕರಿಸಿದರೆ, ಅದಕ್ಕಿಂತ ಇನ್ನೇನು ಬೇಕು ಹೇಳು. ನೀನು, ಒಂದು ವರ್ಷವಿಡೀ ಸಂತೃಪ್ತಭಾವ ದಿಂದ ಇರಬಹುದು ಕಣೋ ಅಂದ್ರು.

ಅಷ್ಟರಲ್ಲಾಗಲೇ ನಮ್ಮ ಚಿದಂಬರ ನಾವು ಹಾಕೋದು ಮಧ್ಯಾಹ್ನದ ಉಟಾನೋ, ರಾತ್ರಿ ಉಟಾನೋ ಅಂತ ಏನೋ ಶುರು ಮಾಡ್ದ – ಏ, ಅದೆಲ್ಲಾ ನೀನೇ ಲೆಕ್ಕ ಹಾಕ್ಕೋ, ಇಷ್ಟು ಮಾತ್ರ ಹೇಳ್ತಿನಿ – ದೇವತೆ ಗಳಿಗೆ ಉತ್ತರಾಯಣ ಹಗಲೆಂದೂ, ದಕ್ಷಿಣಾಯನ ರಾತ್ರಿ ಎಂದೂ ಹೇಳ್ತಾರೆ ಉತ್ತರಾಯಣದಲ್ಲಿ ಬಂದ್ರೆ ಹಗಲೆಂದೂ, ದಕ್ಷಿಣಾಯನದಲ್ಲಿ ಬಂದ್ರೆ ರಾತ್ರಿ ಎಂದೂ ತಿಳ್ಕೊ. ಮುಂದಿಂದೆಲ್ಲಾ ನೀನೇ ಲೆಕ್ಕ ಹಾಕ್ಕೋ ಅಂದ್ರು.

ಇದರ ಬಗ್ಗೆ ತುಂಬಾ ವಾಗ್ವಾದಗಳು ನಡೆದವು. ಸಂಪ್ರದಾಯ, ವೈಚಾರಿಕತೆ – ಹೇಗೆಲ್ಲಾ ಮಾಡಬಹುದು ಎಲ್ಲಾ ಬಂದು ಹೋದವು. ಎಲ್ಲಾ ಸ್ವಾರಸ್ಯಕರ ವಾಗಿತ್ತು. ಒಂಥರಾ Science, Arts , History ಎಲ್ಲಾ ಬಂದು ಹೋದವು. ಅದನ್ನೆಲ್ಲಾ ಬೇಕು ಅಂದ್ರೆ, ಆಮೇಲೆ ಯಾವಾಗಲಾದ್ರೂ ಹೇಳ್ತಿನಿ.

ದೇವರಿದ್ದಾನೆಯೇ?

ಈ ಪಶ್ನೆ ಗೆ ಚಿದಂಬರನ ತಾಯಿಯವರ ಉತ್ತರವನ್ನೂ ಸ್ವಲ್ಪ ನೋಡೋಣ. ಅವರು ಶುರು ಮಾಡಿದ್ದು ಹೀಗೆ.

ನೀವೆಲ್ಲಾ ಮಂಕುತಿಮ್ಮನ ಕಗ್ಗ ಓದಿದ್ದೀರಾ ಆಲ್ವಾ ಅಂದ್ರು, ನಾವೆಲ್ಲರೂ ಹೌದು ಹೌದು ಅಂತ ತಲೆ ಅಲ್ಲಾಡ್ಸಿದ್ವಿ . ಹಾಗಿದ್ರೆ 3 ನೇ ಪದ್ಯ (ಕಗ್ಗ) ಹೇಳಿ ಅಂದ್ರು. ಎಲ್ಲರೂ , ರಾಮೂರ್ತಿ ಹೇಳ್ತಾನೆ ಅಂದ್ರು. ನನಗೆ ಗೊತ್ತಿದ್ದದ್ದೇ ಮೊದಲನೇ 3 ಪದ್ಯ (ಕಗ್ಗ) ಗಳು ಸರಿಯಾಗಿ . ನಾನೂ ಶುರು ಮಾಡ್ಬಿಟ್ಟೆ – ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ . . . .

ಸಂಕ್ಷಿಪ್ತ ಅರ್ಥ – –

ಇದೆಯೋ ಇಲ್ಲವೋ (ದೇವರು) , ನಮಗೆ ತಿಳಿದಿಲ್ಲದ ಒಂದು ವಸ್ತು (ಪರಾಶಕ್ತಿ) ಇರುವುದಾದರೆ, ತನ್ನ ಸ್ವಂತ ಶಕ್ತಿ (ಮಹಿಮೆ) ಯಿಂದ ಈ ಜಗತ್ತು ( ಈ ವಿಶಾಲ ವಿಶ್ವ) ಎಂದಾಗಿ, ಸಕಲ ಜೀವಿಗಳೂ ಇರುವುವೆಂದಾದರೆ ( ವಿಹರಿಪುದು) ಅದು ನಿಶ್ಚಯ ಮತ್ತು ಸತ್ಯವಾದರೆ, ಆ ರಹಸ್ಯ ತತ್ವಕೆ ಶರಣಾಗು ಅದು ಒಳ್ಳೆಯದು, ಎಂದಿದ್ದಾರೆ.

ಇಂದ್ರಿಯಾತೀತವಾದ ಒಂದು ಶಕ್ತಿಯಿಂದ ನಮ್ಮನ್ನೂ ಒಳಗೊಂಡ ಈ ಪ್ರಪಂಚ ಅಸ್ಠಿತ್ವದಲ್ಲಿದೆಯೆಂದು ನಂಬ ಬಹುದಾದರೆ, ವಿಚಿತ್ರವಾದರೂ ಆ ಸತ್ಯಕ್ಕೆ, ಆ ಭಗವಂತನಿಗೆ ಕೃತಜ್ಞತಾ ಪೂರ್ವಕ ನಮಿಸೋಣ, ಶರಣಾಗೋಣ.

ಅವರ ಅರ್ಥ,ವಿವರಣೆ – ನೋಡು, ಬ್ರಹ್ಮಾಂಡ, ಪ್ರಪಂಚ, ವಿಶ್ವ ಅಂತ ಏನು ಹೇಳ್ತೀವೋ, ಅದರಲ್ಲಿ ಸೂರ್ಯನಿಗಿಂತ ಸಣ್ಣ, ದೊಡ್ಡ ಕೋಟ್ಯಾಂತರ ನಕ್ಷತ್ರಗಳಿವೆ ಎಂದು ಹೇಳ್ತಾರೆ. ಇಷ್ಟೇ ಅಲ್ದೇ, ಈ ವಿಶಾಲ ವಿಶ್ವದಲ್ಲಿ ಕೋಟ್ಯಾಂತರ ಬ್ರಹ್ಮಾಂಡಗಳಿವೆ ಅಂತಾನೂ ನಿಮ್ಮ ವಿಜ್ಞಾನದಲ್ಲಿ ಹೇಳ್ತಾರೆ ಆಲ್ವಾ?. ಹಾಗಾದ್ರೆ, ಇವನ್ನೆಲ್ಲಾ ಸೃಷ್ಟಿಸಿದವರು ಯಾರು?. ಗೊತ್ತಿಲ್ಲ ಆಲ್ವಾ?. ಇವನ್ನೆಲ್ಲಾ ಯಾರು ಹೇಗೆ ನಿಯಂತ್ರಿಸುತ್ತಿರಬಹುದು? ಯೋಚನೆ ಮಾಡಿ !. ನಾವು, ಅವನನ್ನೇ ಸೃಷ್ಟಿಕರ್ತ – ದೇವರು ಅಂತ ಕರೆಯೋದು. ನಿನಗೆ ಮುಂದೆ, ಈ ಸೃಷ್ಟಿ ಹೇಗಾಯ್ತು, ಯಾರು ಮಾಡಿದ್ರು ಅಂತ ಗೊತ್ತಾದ್ರೆ, ಈ ದೇವರನ್ನು ಬಿಡು, ಆ ದೇವರನ್ನ ಇಟ್ಕೋ ಅಂದ್ರು. ಇದನ್ನೇ, ಡಿ.ವಿ.ಜಿ. ಯವರು, ಇದೆಯೋ ಇಲ್ಲವೋ (ದೇವರು) , ನಮಗೆ ಗೊತ್ತಿಲ್ಲ. ಯಾವುದೋ ಒಂದು ಶಕ್ತಿ ತನ್ನ ಸ್ವಂತ ಶಕ್ತಿ (ಮಹಿಮೆ) ಯಿಂದ ಈ ಜಗತ್ತು ( ಈ ವಿಶಾಲ ವಿಶ್ವ) ಎಂದಾಗಿ, ಸಕಲ ಜೀವಿಗಳೂ ಇರುವುವೆಂದಾದರೆ, ಆ ರಹಸ್ಯ ತತ್ವಕೆ ಅಂದ್ರೆ , ಆ ಶಕ್ತಿಗೆ ಶರಣಾಗು ಅಂದ್ರೆ ಒಪ್ಪಿಕೋ ಎಂದಿದ್ದಾರೆ. ಈಗ, 2ನೇ ಕಗ್ಗ ಹೇಳು ಅಂದ್ರು.

ನಾನು – ಜೀವ ಜಡ ರೂಪ . . . . ಶುರು ಮಾಡ್ದೆ. ಸಂಕ್ಷಿಪ್ತ ಅರ್ಥ – –

ಜೀವವಿರುವ, ಜೀವವಿಲ್ಲದ (ಜಡರೂಪ ) ( ಚರಾ ಚರ ) ಎಲ್ಲ ವಸ್ತುಗಳನ್ನೂ ತುಂಬಿಕೊಂಡಿರುವ ಈ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು , ಒಳಗೇ ತುಂಬಿಕೊಂಡು ಇರುವಂತೆ ಮತ್ತು ಇದು ನಮ್ಮ ಭಾವಕ್ಕೆ ಒಳಪಡದಂತೆ, ಅಳತೆಗೂ ಸಿಗದಂತೆ ಇರುವುದೋ ಆ ವಿಶೇಷಕ್ಕೆ ( ಆ ಶಕ್ತಿಗೆ ) ನಮಸ್ಕರಿಸು (ಮಣಿಯೋ) ಎಂದು ಹೇಳಿದ್ದಾರೆ.

ಚಿದಂಬರನ ತಾಯಿ: ಜೀವವಿರುವ, ಜೀವವಿಲ್ಲದ ಚರಾಚರ ಅಂತೆಲ್ಲಾ ಏನು ಹೇಳ್ತೀವೋ, ಎಲ್ಲವನ್ನೂ ಈ ವಿಶಾಲ ವಿಶ್ವ ತುಂಬಿಕೊಂಡಿದೆ ಮತ್ತು ಯಾವುದೋ ಒಂದು ಶಕ್ತಿ ಇವನ್ನೆಲ್ಲಾ ಆವರಿಸಿಕೊಂಡಿದೆ. ಅದು ಅಗೋಚರವೂ ಹೌದು, ನಿರಾಕಾರ, ನಿರ್ಗುಣ ಅಂತೆಲ್ಲಾ ಹೇಳ್ತೀವಲ್ವಾ, ಅದೂ ಹೌದು. ಇದನ್ನೇ ಅವರು ಭಾವಕ್ಕೂ, ಒಳಪಡದ, ಅಳತೆಗೂ ಸಿಗದ ಅಂದಿದ್ದಾರೆ. ನೋಡು, ಅವರು ಇಲ್ಲೂ, ಅವರು ದೇವರು ಅನ್ಲಿಲ್ಲ. ಆ ವಿಶೇಷಕ್ಕೆ ( ಆ ಶಕ್ತಿಗೆ ) ನಮಸ್ಕರಿಸು ಅಂದ್ರು. ಈಗ್ಲಾದ್ರೂ ಅರ್ಥ ಆಯ್ತಾ ದೇವ್ರು ಅಂದ್ರೆ ಅಂತ ಹೇಳಿ , ಈಗ ಮೊದಲನೇ ಕಗ್ಗ ಹೇಳೋ ಅಂತ ನಂಗೆ ಅಂದ್ರು.

ನಾನು – ಶ್ರೀ ವಿಷ್ಣು ವಿಶ್ವಾದಿ ಮೂಲ . . . . ಶುರು ಮಾಡ್ದೆ.

ಸಂಕ್ಷಿಪ್ತ ಅರ್ಥ – –

ಶ್ರೀ ವಿಷ್ಣು, ಪ್ರಪಂಚಕ್ಕೆ ಆದಿಮೂಲ ನಾಗಿರುವನು ಎಂಬುದೊಂದು ನಂಬಿಕೆ. ಶ್ರೀ ವಿಷ್ಣುವನ್ನು ಆದಿ ಮೂಲ, ಸರ್ವೇಶ, ಮಾಯಾಲೋಲ, ಪರಬ್ರಹ್ಮನೆಂದು ವಿಧವಿಧ ವಾಗಿ ಹಲವಾರು ಕಡೆ ಹೇಳಿರುವುದು ಗೊತ್ತೇಯಿದೆ. ಡಿವಿಜಿಯವರ ಪ್ರಕಾರ, ನಾವು ಆ ಭಗವಂತನನ್ನು ಕಾಣದಿದ್ದರೂ ಪ್ರೀತಿಯಿಂದ, ಭಕ್ತಿ ಭಾವದಿಂದ ನಂಬಿರುವೆವು. ಇದನ್ನೇ ಅವರು ವಿಚಿತ್ರ ವೆಂದು, ವಿಚಿತ್ರವಾದರೂ, ಜನರು ನಂಬಿರುವ ಆ ಭಗವಂತನಿಗೆ (ವಿಚಿತ್ರಕೆ) ನಮಿಸು ಎಂದು ಹೇಳಿದ್ದಾರೆ.

ಚಿದಂಬರನ ತಾಯಿ: ನೋಡಿದ್ಯಾ, ಈಗ ಎಲ್ಲರಿಗೂ, ದೇವರು ಅಂದ್ರೆ ಯಾರು, ದೇವರಿದ್ದಾನೆಯೇ ಎಂಬುದರ ಬಗ್ಗೆ ಅರ್ಥವಾಗಿರಬೇಕು. ಮಂಕುತಿಮ್ಮನಕಗ್ಗ ದ ಮೊದಲ ಮೂರು ಕಗ್ಗಗಳನ್ನ 3, 2 ,1 ರಂತೆ ಕ್ರಮವಾಗಿ ಓದಿಕೊಂಡರೆ ಅರ್ಥವಾಗಿ ಬಿಡುತ್ತೆ ಅಂದ್ರು.

ಎಷ್ಟು ಸರಳವಾಗಿ, ಅರ್ಥವಾಗುವಂತೆ ತಿಳಿಹೇಳಿದ ಹಿರಿಯರಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s