ನಮ್ಮ ಸ್ನೇಹಿತನಿಗೆ ಹುಶಾರಿಲ್ಲ, 3 ದಿನ admit ಆಗಿ ಎಲ್ಲಾ checkup ಮಾಡೋಣ ಅoತ ನಾರಾಯಣ ಹೃದಯಾಲಯ ದವರು ಹೇಳಿದಾರೆ ಅoತ ಗೊತ್ತಾಯ್ತು. ನೆನ್ನೆ, ನೋಡಿಕೊoಡುಬರೋಣ ಅoತ ನಾನು, ರತ್ನ ಹೋಗಿದ್ವಿ. ಯಾಕೋ ತುoಬಾ weak ಆಗಿದಾನೆ ಅoತ ಅನ್ನಿಸ್ತು. ಸಾoತ್ವನದ ಮಾತು ಹೇಳಿ, ಅದು ಇದು ಮಾತಾಡ್ತಾ, ನಮ್ಮ ಅಮ್ಮ, ಅವರಮ್ಮ ಎಲ್ಲರನ್ನೂ ಜ್ಞಾಪಿಸಿಕೊoಡ್ವಿ.
ಆಮೇಲೆ, ಯಾವುದೋ ಒoದು ವಿಷಯ ಮಾತಾಡಕ್ಕೆ ಶುರು ಮಾಡಿದ್ವಿ. ಯಾಕೋ ವಾದವೇ ಶುರುವಾಯ್ತು. ಏನೋ ಅಂತೂ ಒಂದು conclusion ಗೆ ಬಂದ್ವಿ.
ಇರಲಿ, ಮನೆಗೆ ಬಂದಮೇಲೆ, ನನ್ನ ಯೋಚನಾ ಲಹರಿ ಶುರುವಾಯ್ತು. ಯಾಕೆ ಒಂದು ವಿಷಯದಲ್ಲಿ ಇಬ್ಬರಲ್ಲಿ ಸುಲಭವಾಗಿ ಒಮ್ಮತವೇರ್ಪಡುವುದಿಲ್ಲ?. ಸಮಾಧಾನವಾಗಿ ಯೋಚಿಸ್ತಾ ಹೋದಾಗ , ಮಾನ್ಯ DVG ಯವರ ಮರುಳಮುನಿಯನ ಕಗ್ಗವೊಂದು ಜ್ಞಾಪಕಕ್ಕೆ ಬಂತು - ನೀವೂ, ಒಂದು ಸಲ ಮೆಣಸು ಹುಣಿಸೆಗಳ ಸವಿ ನೋಡಿ ಬಿಡಿ.
ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ |
ಹುಣಿಸೆಯಿಂ ನಿಂಬೆ ಮಾವುಗಳ ಹುಳಿ ಬೇರೆ ||
ಮನುಜನುಳಿದ ಪ್ರಾಣಿಯಿಂ ಬೇರೆ ತಾಂ ಬೇರೆ |
ಗುಣದೊಳೋರೊರ್ವನುಂ – ಮರುಳ ಮುನಿಯ || (೧೧೭)
ಮೆಣಸು, ಹುಣಿಸೆಹಣ್ಣು ಇತ್ಯಾದಿ ವಸ್ತುಗಳ ರುಚಿಯು ಬೇರೆ ಬೇರೆಯಾಗಿರುತ್ತವೆ. ಅದು ಹಾಗೇ ಇರಲಿ ಮತ್ತು ಅವು ಹಾಗಿದ್ದರೇ ಚೆನ್ನವೂ ಹೌದು. ಆದರೆ ಹುಳಿಯು ಒಂದೇ ಆದರೂ ಹುಣಿಸೆಹಣ್ಣು, ನಿಂಬೆಹಣ್ಣು ಮತ್ತು ಮಾವಿನಕಾಯಿಗಳ ಹುಳಿಯ ರುಚಿಗಳು ಬೇರೆ ಬೇರೆಯಾಗಿರುತ್ತವೆ.
ಹಾಗೆಯೇ ಈ ಮನುಷ್ಯನೂ ಸಹ ಪ್ರಪಂಚದಲ್ಲಿ ಒಂದು ಜೀವಿಯಾದರೂ ಇವನು ಇತರ ಪ್ರಾಣಿಗಳಿಂದ ಬೇರೆಯಾಗಿ ಕಾಣಿಸಿಕೊಳ್ಳುತ್ತಾನೆ. ಅದೂ ಅಲ್ಲದೆ ಬೇರೆ ಬೇರೆ ಹುಳಿಗಳ ರುಚಿಯಂತೆ ಒಬ್ಬೊಬ್ಬ ಮನುಷ್ಯನೂ ಬೇರೆ ಬೇರೆ ಸ್ವಭಾವಗಳನ್ನು ಹೊಂದಿರುತ್ತಾನೆ. ಎಷ್ಟು ಚೆನ್ನಾಗಿದೆ ಅವರ ಒಕ್ಕಣೆ ಅಲ್ಲವೇ? ಅರ್ಥಪೂರ್ಣವಾಗೂ ಇದೆಯಲ್ಲವೇ?
ಎಲ್ಲರ ವ್ಯಕ್ತಿತ್ವವೂ ವಿಭಿನ್ನ. ಪ್ರತಿಯೊಬ್ಬರ ಮನಸ್ಸೂ ಭಿನ್ನ ಭಿನ್ವವಾಗಿ ಯೋಚಿಸುತ್ತದೆಯಲ್ಲವೇ? ನಾವೇ ಸರಿ, ನಾವು ಯೋಚಿಸಿದಂತೆಯೇ ಪ್ರತಿಯೊಬ್ಬರೂ ಯೋಚಿಸಬೇಕು ಮತ್ತು ನಡೆದುಕೊಳ್ಳಬೇಕು ಎಂಬುದು ಎಷ್ಟು ಸರಿ?! ನಮ್ಮ ಮನಸ್ಸು ಮಾತ್ರ ಹಾಗೆಯೇ ಯೋಚಿಸುತ್ತಿರುತ್ತದೆ. ನಾನೇ ಸರಿ ಎಂಬ ಅನಿಸಿಕೆ ಜಾಗೃತವಾಗಿರುತ್ತದೆ. ಮತ್ತೆಲ್ಲರ ಭಾವನೆ ಅನಿಸಿಕೆಗಳು ನಮಗೆ ಪೂರಕವಾಗಿ ಕಾಣಿಸುವುದೇ ಇಲ್ಲ. ಇಲ್ಲೇ ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಶುರುವಾಗುವುದು ಎಂಬುದೂ ನನ್ನ ಒಂದು ಅನಿಸಿಕೆ. ಸ್ವಲ್ಪ ಹೊಂದಾಣಿಕೆ ಈ ನಿಟ್ಟಿನಲ್ಲಿ ಅವಷ್ಯಕ ವೆನಿಸುತ್ತದೆ. ಎಲ್ಲರಲ್ಲೂ ಭಾವನಾತ್ಮಕ ಸಂಬಂಧವನ್ನು ಮೈಗೂಡಿಸಿಕೊಳ್ಳುವ ಅವಷ್ಯಕತೆ ಕಂಡು ಬರುತ್ತದೆಯಲ್ಲವೇ? ಸುಂದರ ಬದುಕು ಅದಾಗೇ ಬರುವುದಿಲ್ಲ. ಪ್ರೀತಿ, ತಾಳ್ಮೆ , ಸಂತೋಷ, ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಲು ಪ್ರಯತ್ನ ಪಡಬೇಕು, ನಿರ್ಮಿಸಿಕೊಳ್ಳಬೇಕು ಅಲ್ಲವೇ? ಹೌದು, ಹೇಳುವುದು ಎಷ್ಟು ಸುಲಭ ? ಆಚರಣೆ ಕಷ್ಟಸಾಧ್ಯ. ಪ್ರಯತ್ನಪಟ್ಟಲ್ಲಿ ಖಂಡಿತಾ ಸಾಧ್ಯ.
ಬಾಳು ಬದುಕಿನ ವಾಸ್ತವಿಕೆಯ ಅರಿವು ನಮ್ಮಲ್ಲಿರಬೇಕು ಅಷ್ಟೇ.
ನೀವೇನಂತೀರಿ?