Monotheism and Polytheism (Author: RamaMurthy)

In the following article, the author explores the logic behind single and multiple Gods in the Hindu religion. It is in Kannada language.

ಅವತ್ತು ನಮ್ಮ ಹರಟೆ ಮಧ್ಯದಲ್ಲಿ, ನಮ್ಮ ಚಿದಂಬರ ನಮ್ಮಲ್ಲಿ ಇಷ್ಟೊಂದು ದೇವತೆಗಳಿದ್ದಾರಲ್ಲಾ, ಯಾವ್ಯಾವ ದೇವರನ್ನಾ ಅಂತ ಪೂಜೆ ಮಾಡ್ತೀರಾ , ಅಲ್ದೇ ಒಂದೊಂದ್ ಹಬ್ಬಕ್ಕೆ ಒಂದೊಂದ್ ದೇವ್ರು ಅಂದ.
ನಮ್ಮಮ್ಮ,

ಅದು ಹಾಗಲ್ವೋ ಮುಖ್ಯವಾಗಿ ತ್ರಿಮೂರ್ತಿಗಳು – ಬ್ರಹ್ಮ, ವಿಷ್ಣು, ಮಹೇಶ್ವರ. ಸೃಷ್ಟಿ, ಸ್ಥಿತಿ, ಲಯ ಕಾರಕರು. ಬೇರೆಲ್ಲಾ ಅವರ ರೂಪಾಂತರಗಳು

ಅಂತ ಇನ್ನೂ ಏನೋ ಹೇಳ್ತಾ ಇದ್ರು.

ಅಷ್ಟರಲ್ಲಿ ನೀವು ಸ್ತ್ರೀ ದೇವತೆಗಳನ್ನ ಬಿಟ್ರಲ್ಲ? ಅಂದ.
ಅದು ಹಾಗಲ್ವೋ ಅದು ಜೊತೆ ಜೊತೆಗೇ ಬರುತ್ತೆ, ಬ್ರಹ್ಮ – ಸರಸ್ವತೀ , ವಿಷ್ಣು – ಲಕ್ಷ್ಮೀ , ಮಹೇಶ್ವರ – ಪಾರ್ವತೀ .

ಹಾಗಾದ್ರೆ 6 ಅಂತ ಆಯ್ತಲ್ವಾ ಅಂದ. ಹಾಗೇ ಎಲ್ಲಾ ದೇವತೆಗಳಿಗೂ, ಅಷ್ಟೋತ್ತರ ನಾಮಾವಳಿ, ಸಹಸ್ರನಾಮ ಎಲ್ಲಾ ಇದ್ಯಲ್ಲಾ? ಅಂದ.

ಅಷ್ಟೋತ್ತರ ನಾಮಾವಳಿ, ಸಹಸ್ರನಾಮ ಇವೆಲ್ಲಾ ಆಯಾದೇವತೆಗಳ ಗುಣಾತ್ಮಕ ಸ್ವರೂಪ, ವಿಶೇಷತೆಗಳ ಬಣ್ಣನೆ. ಅವುಗಳನ್ನು ಕೇಳಿದರೂ, ಹೇಳಿದರೂ, ಆ ಗುಣಾತ್ಮಕ ವಿಶೇಷತೆಗಳು ನಮಗೆ ಒಂದು ತರಹ ದೈವಿಕ ಮಾರ್ಗದರ್ಶನ ಕೊಡುತ್ತೆ ಅಥವಾ ನಂಬಿಕೆ ಅನ್ಕೋ ಅಂದ್ರು.

ಅಷ್ಟರಲ್ಲಿ, ಚಿದಂಬರನ ಅಮ್ಮ, ನಿಂಗ್ಯಾಕೆ, ಈ ಪ್ರಶ್ನೆ ಬಂತೋ ಈಗ? ಅಂದ್ರು. ಅದಿರ್ಲಿ, ನೀವೆಲ್ಲಾ ಎಷ್ಟು ಅಂದ್ಕೊಂಡಿದೀರಾ. ನಿಮ್ಹತ್ರ ಏನೋ ಒಂದು ಸಂಖ್ಯೆ ಇದ್ರೆ ಈ ಪ್ರಶ್ನೆ ಬರೋಕೆ ಸಾಧ್ಯ ಅದನ್ನ ಹೇಳಿ ಅಂದ್ರು.
ಚಿದಂಬರ, ಹಾಗೇನಿಲ್ಲ, ಆದ್ರೂ ಯಾಕೋ ಕೇಳ್ಬೇಕು ಅನ್ನಿಸ್ತು ಕೇಳ್ದೆ.

ಏ, ರಾಮೂರ್ತಿ, ನೀನ್ಹೇಳೋ ಅಂದ್ರು.

ನೋಡೀ, ನನ್ನ ಲೆಕ್ಕದಲ್ಲಿ, ನಾನು ಅನ್ಕೊಂಡಿರೋ ಹಾಗೆ, ಯಾರೂ ಲೆಕ್ಕ ಹಾಕಿಲ್ಲ. ಹಾಕಕ್ಕೆ ಸಾಧ್ಯಾನು ಇಲ್ಲ. ಇದು, ನನ್ನ ಅಲ್ಪ ತಿಳುವಳಿಕೆ ಇರಬಹುದು, ಅಥವಾ ನನಗೆ ಸರಿಯಾಗಿ ಗೊತ್ತಿಲ್ದೇ ಇರೋದ್ರಿಂದ ಹೀಗೆ ಹೇಳ್ತಿದೀನಿ ಅಂದ್ಕೊಳಿ.
ನಮ್ಮಮ್ಮ ಹೇಳ್ದ ಹಾಗೆ, ತ್ರಿಮೂರ್ತಿಗಳನ್ನ ಆಧಾರವಾಗಿ ಇಟ್ಕೋಬಹ್ದು ಅನ್ಸುತ್ತೆ. ಬೇರೆಲ್ಲಾ ಅವರು ಹೇಳಿದಹಾಗೆ, ಅವರವರ ಭಾವಕ್ಕೆ ತಕ್ಕಂತೆ, ನೂರಾರು, ಸಾವಿರಾರು ದೇವರುಗಳು ಮೂಡಿಬಂದಿರಬಹುದು ಅನ್ಸುತ್ತೆ.
ನೋಡಿ, ನಾವಿರುವ ವಿಶ್ವವೇ ಒಂದು ಅಚ್ಚರಿ. ಯಾವಕಾಲಕ್ಕೂ ಪ್ರಕೃತಿಯೇ ದೇವರು, ದೇವರ ಕಲ್ಪನೆಗೆ ಆಧಾರ. ಒಪ್ಪ ಬಹುದು ಬಿಡಬಹುದು ಇದು ನನ್ನ ನಿಲುವು. ಪ್ರಕೃತಿಯ ಪ್ರತಿ ಅದ್ಭುತ ಶಕ್ತಿಯೂ ಒಂದೊಂದು ದೇವ ದೇವಿಯರ ಕೊಡುಗೆ ಎಂದು ನಂಬುತ್ತಾ ಆಯಾ ದೇವ ದೇವಿಯರನ್ನು ಪೂಜಿಸುತ್ತಾ ಬಂದವರು ನಾವು. ಮಳೆ, ಗಾಳಿ, ಅಗ್ನಿ, ಹರಿಯುವ ನೀರು ಎಲ್ಲವೂ ಆದಿಕಾಲದಿಂದಲೂ ಅಚ್ಚರಿ, ಅದ್ಭುತ ಹಾಗೆಯೇ ನಮ್ಮ ಬದುಕನ್ನು ರೂಪಿಸಿಕೊಟ್ಟ, ಇವೆಲ್ಲವೂ ದೇವ ಸಮಾನ. ಹುಟ್ಟಿಗೂ ಸಾವಿಗೂ ಒಬ್ಬೊಬ್ಬ ದೇವರು. ಎಲ್ಲಾ ಆಗು ಹೋಗುಗಳಲ್ಲೂ ದೇವರೇ ಕಾರಣೀ ಭೂತವಾಗಿ ಕಂಡುಕೊಂಡವರು ನಾವು.
ಇನ್ನೂ ಹೇಳಬೇಕೆಂದರೆ, ಈ ನಿಟ್ಟಿನಲ್ಲಿ ಎರಡು ಸಿದ್ಧಾಂತಗಳು ಪ್ರಸ್ತುತದಲ್ಲಿವೆ.
ಒಂದು ಏಕೇಶ್ವರ ವಾದ, ಎರಡನೆಯದು ಬಹುದೇವತಾ ವಾದ. ಸಿದ್ಧಾಂತ ಎಂದೂ ಕರೆಯ ಬಹುದು.
ಏಕೇಶ್ವರ ವಾದಕ್ಕೇ ನನ್ನ ನಿಲುವು. ಬಹುದೇವತಾ ಉಪಾಸಕರು ನಮ್ಮಲ್ಲಿ ಹೆಚ್ಚು ಅನ್ನಬಹುದು. ಬಹುದೇವತಾ ಉಪಾಸಕರು ಕೂಡ ಕೊನೆಗೆ ಈ ಎಲ್ಲ ದೇವಾನುದೇವತೆಗಳ ಮೂಲವನ್ನು ಬ್ರಹ್ಮನೆಂದು ಒಪ್ಪಿಕೊಳ್ಳುವ ನಿಲವಿಗೆ ಬರುತ್ತಾರೆ.
ಹೀಗಿರುವಾಗ, ಪ್ರತಿಯೊಂದು ಕ್ರಿಯೆ, ಶಕ್ತಿಯನ್ನೂ ದೇವರನ್ನಾಗಿಸಿಕೊಂಡರೆ ಆ ಎಲ್ಲಾ ದೇವರನ್ನೂ ಎಣಿಸಲು ಸಾಧ್ಯವೇ?. ಒಂದು ನೆನಪು , ಪ್ರತೀ ಲೋಕಕ್ಕೆ 11 ರಂತೆ ಮೂರೂ ಲೋಕಕ್ಕೆ ಒಟ್ಟು 33 ಅಂತ ಓದಿದ್ದು ಜ್ಞಾಪಕಕ್ಕೆ ಬರ್ತಿದೆ ಅಂದೆ.

ನಮ್ಮ ಚಿದಂಬರ ಅದು 33 ಅಲ್ಲ 33ಕೋಟಿ ಅಂದ.

ಏ, ತಡಿಯೋ ನಾನೂ ಸ್ವಲ್ಪ ಹೇಳ್ತಿನಿ, ಮತ್ತೆ ನಿನ್ನ 33ಕೋಟಿ ಗೂ ಉತ್ತರ ಕೊಡ್ತೀನಿ ಅಂತ ನಮ್ಮ ಚಿದಂಬರನ ತಾಯಿ ಶುರು ಮಾಡ್ಕೊಂಡ್ರು.

ನನಗೆ ತಿಳಿದಿರೋ ಹಾಗೆ, ದೇವರಿದ್ದಾನೆ, ಆದರೆ ಕಂಡವರಿಲ್ಲ. ಸಾಕ್ಷಾತ್ಕರಿಸಿಕೊಂಡವರು ಅಂತ ಹೇಳಬಹುದಾದವರೆಲ್ಲರ ದೇವರ ಕಲ್ಪನೆ ಅಂದರೆ ದೇವರು ಒಂದೇ ಆಗಿದೆಯೇ?. ಇಲ್ಲ ಅನ್ನಬಹುದಲ್ಲವೇ. ಒಬ್ಬೊಬ್ಬರು, ಒಂದೊಂದು ತರಹ ಕಂಡುಕೊಂಡಿದ್ದಾರೆ. ಕೆಲವರಿಗೆ ನಿರ್ವಿಕಾರ, ಮತ್ತೆ ಕೆಲವರಿಗೆ ಸಾಕಾರ. ಸಾಕಾರವಾದರೂ ಒಂದೇ ಆಗಿದೆಯಾ – ಇಲ್ಲ. ಒಬ್ಬೊಬ್ಬರು ಒಂದೊಂದು ರೂಪದಲ್ಲಿ ಕಂಡುಕೊಂಡಿದ್ದಾರೆ.
ರಾಮಕೃಷ್ಣರು ಕಾಳಿಕಾ ಆರಾಧಕರಾಗಿದ್ದರು. ಅವರು ಅವರದ್ದೇ ಆದ ಕಲ್ಪನೆಯಲ್ಲಿ ಕಾಳಿಕಾ ದೇವಿಯನ್ನ ಸಾಕ್ಷಾತ್ಕರಿಸಿಕೊಂಡಿದ್ದರು. ನಾವು ಕಾಳಿಕಾ ದೇವಿಯನ್ನ, ಪಾರ್ವತಿಯ ರೂಪ, ಅವತಾರ ಅನ್ನೋದಾದರೆ, ನಮ್ಮ ಮನಸ್ಸಿನಲ್ಲಿ , ಪಾರ್ವತಿ ಅಂದ್ರೆ – ಒಂದು ಸೌಮ್ಯ ರೂಪ ಬಂದು ನಿಲ್ಲುತ್ತೆ. ಹಾಗೆಯೇ, ಕಾಳಿಕಾ ದೇವಿ ಅಂದ್ರೆ, ಸ್ವಲ್ಪ ಭೀಕರ, ತೀವ್ರ ರೂಪ ಬಂದು ನಿಲ್ಲುತ್ತೆ. ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ ಹೀಗೆ ಉದಾಹರಣೆ ಕೊಡಬಹುದು.
ಇನ್ನು, ಹೇಳಬೇಕೆಂದರೆ, ನಾವು ಸಾಂಸಾರಿಕರು – ನಮಗೆ ಗೃಹ ನಿರ್ವಹಣೆಯೇ ಪ್ರಾಮುಖ್ಯ ಹಾಗೂ ಕರ್ತವ್ಯ ಕೂಡ. ಹಾಗಿರುವಾಗ, ಸಾಂಸಾರಿಕ ನಿರ್ವಹಣೆ, ಕರ್ತವ್ಯಗಳನ್ನೂ ತೊರೆದು, ದೇವರ ಸಾಕ್ಷಾತ್ಕಾರಕ್ಕಾಗಿಯೋ, ದೇವರನ್ನ ಒಲಿಸಿಕೊಳ್ಳಲೋ ಸಮಯವನ್ನ ಎಲ್ಲಿಂದ ಹೊಂದಿಸುವುದು – ಕಷ್ಠಸಾಧ್ಯ ಅಲ್ಲವೇ?.

ಋಷಿ ಮುನಿಗಳು, ಸಾಕ್ಷಾತ್ಕರಿಸಿಕೊಂಡವರು ಸಾಂಸಾರಿಕ ಬಂಧನದಿಂದ ವಿಮುಕ್ತರಾಗಿ, ದೇವರ ಸಾಕ್ಷಾತ್ಕಾರವೇ ಪರಮಗುರಿಯಾಗಿರಿಸಿಕೊಂಡು, ಆಶ್ರಮ ವಾಸಿಗಳಾಗೋ, ಬೆಟ್ಟ ಪರ್ವತಗಳಮೇಲೊ ಯಾವುದಾದರೂ ಏಕಾಂತ ಸ್ಥಳದಲ್ಲಿ ತಮ್ಮದೇ ಆದ ಕಲ್ಪನೆಯಲ್ಲಿ ಏಕಚಿತ್ತದಿಂದ ಆರಾಧಿಸಿಯೋ, ತಪಸ್ಸು ಮಾಡಿಯೋ ಸಾಕ್ಷಾತ್ಕರಿಸಿಕೊಂಡಿರಬಹುದು. ಹೀಗೆ,ಇವರುಗಳು ಒಂದೇ ಸತ್ಯವನ್ನು, ಬೇರೆ ಬೇರೆ ಸ್ವರೂಪಗಳಲ್ಲಿ ಕಂಡುಕೊಂಡಿರಬಹುದು.
ನಮಗೆ ಹಾಗೆ ಮಾಡಲು ಸಾಧ್ಯವಾಗದೇ ಇರೋದ್ರಿಂದ, ಋಷಿ ಮುನಿಗಳು, ಸಾಕ್ಷಾತ್ಕರಿಸಿಕೊಂಡವರು ನಂಬಿದ, ಸಾಕ್ಷಾತ್ಕರಿಸಿಕೊಂಡ ದೇವರನ್ನೇ ನಂಬಿ, ನಮ್ಮ ಬದುಕನ್ನೂ ರೂಪಿಸಿಕೊಳ್ಳುತ್ತಾ ನಾವೂ ಪೂಜಿಸಲು, ಆರಾಧಿಸಲು ನಮ್ಮ ಹಿರಿಯರೂ, ನಂತರ ನಾವೂ ಪ್ರಾರಂಭಿಸಿರಬಹುದು.

ಯಾವ ದೇವರನ್ನ ಪೂಜಿಸುವುದು, ಯಾವರೀತಿ ಪೂಜಿಸುವುದು, ಆರಾಧಿಸುವುದು ನಮಗೆ ಗೊತ್ತಿಲ್ಲ. ಏನ್ಮಾಡೋದು? ಗೊತ್ತಿಲ್ಲ.
ಋಷಿ ಮುನಿಗಳೋ , ಸಾಕ್ಷಾತ್ಕರಿಸಿಕೊಂಡವರೋ ಹೇಳಿದಂತೆ ನಡೆಯುವುದೊಂದೇ ನಮಗೆ ಉಚಿತವಾಗಿ ಕಂಡುಬಂದ ಮಾರ್ಗ. ಸಂಸಾರ ತಾಪತ್ರಯದಲ್ಲಿ ಯಾರುಯಾರು ಏನೇನು ಹೇಳಿದರೂ ಕೇಳುವ, ನಡೆದು ಕೊಳ್ಳುವ ಎಲ್ಲ ದೇವರನ್ನೂ, ಜೊತೆಗೆ, ಋಷಿ, ಮುನಿ ಪುಂಗವರನ್ನೂ ಪೂಜಿಸುತ್ತಾ, ಆರಾಧಿಸುತ್ತಾ, ಅದೇ ಕ್ರಮವಾಗಿ ಹಬ್ಬ ಹರಿದಿನವಾಗಿ ಮಾರ್ಪಾಡಾಗಿರಬಹುದು. ಹಬ್ಬ, ಹರಿದಿನ, ಪೂಜೆ, ಪುನಸ್ಕಾರ, ಹೋಮ ಹವನ, ಅರ್ಚನೆ, ವ್ರತ, ಕಥೆ ಇವುಗಳೆಲ್ಲಾ ಅವರ ಕೊಡುಗೆ. ಒಟ್ಟಿನಲ್ಲಿ, ಈ ಯಾವುದೇ ಆಚರಣೆಯಿಂದ ನಮ್ಮ ಸಂಸಾರ ಸುಖ, ಶಾಂತಿ, ನೆಮ್ಮದಿಯಿಂದ ಸಾಗಿದರೆ ಸಾಕು ಅನ್ನುವುದೂ ಎಲ್ಲರ ನೈತಿಕ ನಿಲುವು. ಹೀಗಾಗಿ ಅದೆಷ್ಟು ದೇವತೆಗಳೋ ? ಲೆಕ್ಕವಿಲ್ಲ. ಪ್ರತೀ ಗ್ರಾಮಕ್ಕೂ ಗ್ರಾಮದೇವತೆ, ಹಾಗೆಯೇ ಊರದೇವತೆ. ಅಂದಾಜಿಸಲು ಸಾಧ್ಯವಿಲ್ಲ ಆಲ್ವಾ?.

ಇನ್ನು 33ಕೋಟಿ ದೇವತೆಗಳ ಬಗ್ಗೆ ಹೇಳ್ತೀನಿ . ಇದು, ಯಾಕೋ ನನಗೆ ತಪ್ಪು ಅನ್ಸಲ್ಲ.
ನಾನು ಇದನ್ನ ಎರಡು ಆಯಾಮದಲ್ಲಿ ಯೋಚಿಸ್ತೀನಿ.

ಮೊದಲನೆಯದಾಗಿ, ನಮ್ಮ ದೇಶಕ್ಕೆ, ಭಾರತೀಯ ಸಂಸ್ಕೃತಿಗೆ ಸೀಮಿತವಾಗಿ ಯೋಚ್ಸೋದಾದ್ರೆ, ಒಂದು ಕಾಲಘಟ್ಟದಲ್ಲಿ ನಮ್ಮ ಜನಸಂಖ್ಯೆ, 33ಕೋಟಿ ಇದ್ದಿರಬಹುದು. ನಮ್ಮಲ್ಲಿ ಎಲ್ಲರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಇದೆ. ದೇಹವೇ ದೇವಾಲಯ . . . . ಅಂತೆಲ್ಲಾ ಹೇಳ್ತೀವಲ್ವಾ?. ಯಾರೋ ಪುಣ್ಯಾತ್ಮರು,ಜನಸಂಖ್ಯೆ ಆಧಾರದಮೇಲೆ, 33ಕೋಟಿ ಎಂದು ಹೇಳಿರಬಹುದು.

ಎರಡನೆಯದಾಗಿ, ಇದನ್ನ ನಾವು ನಮ್ಮ ದೇಶಕ್ಕೋ, ನಮ್ಮ ಭೂಮಂಡಲಕ್ಕೋ ಯಾಕೆ ಸೀಮಿತವಾಗಿ ನೋಡಬೇಕು. ವಿಶಾಲ ವಿಶ್ವದ ಸೃಷ್ಟಿ ಯನ್ನು ಗಣನೆಗೆ ತಗೋ ಬೇಕು. ಹಿಂದೆ, ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಬಗ್ಗೆ ನಮ್ಮ ಹರಟೆಯಲ್ಲಿ ರಾಮೂರ್ತಿ ಬ್ರಹ್ಮಾಂಡದ ಬಗ್ಗೆ ಹೇಳ್ತಾ, ವಿಜ್ಞಾನಿಗಳ ಪ್ರಕಾರ ಈ ವಿಶಾಲ ವಿಶ್ವದಲ್ಲಿ ಕೋಟ್ಯಾಂತರ ಬ್ರಹ್ಮಾಂಡಗಳಿವೆ. ಸಣ್ಣ ಪುಟ್ಟ ವೆಲ್ಲಾ ಸೇರಿ ಒಂದು ಲಕ್ಷ ಕೋಟಿ [100 billion] ಗೂ ಅಧಿಕ ಬ್ರಹ್ಮಾಂಡಗಳಿವೆ. ಒಂದೊಂದು ಬ್ರಹ್ಮಾಂಡದಲ್ಲೂ ಕೋಟ್ಯಾಂತರ ನಕ್ಷತ್ರಗಳಿವೆ ಬ್ರಹ್ಮಾಂಡಗಳಲ್ಲಿ ಸೂರ್ಯ ಮಾತ್ರವಲ್ಲ ಸೂರ್ಯನಂಥ ನಕ್ಷತ್ರಗಳು ನೂರಾರು ಶತಕೋಟಿ ನಕ್ಷತ್ರ ಗಳು,100ಶತಕೋಟಿ ಗೂ ಹೆಚ್ಚು ಗ್ರಹಗಳೂ ಇರುವುದಾಗಿ ಹೇಳಿದ್ದ.
ಒಂದೊಂದು ನಕ್ಷತ್ರಕ್ಕೆ ಒಬ್ಬೊಬ್ಬ ಪ್ರತಿನಿಧಿಸುವ, ಒಬ್ಬೊಬ್ಬ ಪ್ರಧಾನ ದೇವತೆ ಯನ್ನು, ಕಲ್ಪಿಸಿಕೊಳ್ಳುತ್ತಾ ಹೋದರೂ, 33ಕೋಟಿ ಸಾಕಾಗೊಲ್ವೋ ಹುಡುಗ್ರಾ. ಎಷ್ಟು ದೇವ್ರಿದ್ದಾರೆ? ಇಷ್ಟು ದೇವ್ರು ಬೇಕೇ? ಅಂತೆಲ್ಲಾ ಲೆಕ್ಕ ಹಾಕೋದ್ಬಿಟ್ಟು, ನಮ್ಮ ಹಾಗೆ ಯಾವ್ದಾದ್ರೂ ನಿಮಗೆ ಇಷ್ಟವಾದ ದೇವರನ್ನ ಆರಾಧಿಸಿ, ಪೂಜಿಸಿ.
ಸತ್ಯದರ್ಶನ ಮಾಡಿಸೋದು, ಮಾಡಿಕೊಳ್ಳೋದು ಎರಡೂ ಕಷ್ಟಾನೇ.
ನೀವೇ ಈ ವಿಶ್ವಸೃಷ್ಟಿಯ ಬಗ್ಗೆಯೇ ಯೋಚಿಸ್ತಾ ಹೋಗಿ. ಇದಕ್ಕೆ ಸ್ವಲ್ಪವಾದರೂ ಸಮಯವನ್ನು ಕೊಡಿ. ನಿಮಗೂ ಉತ್ತರ ಸಿಗಬಹುದು ಅಥವಾ ಯಾವ್ದಾದ್ರೂ ದೇವರು ಕಾಣಿಸಬಹ್ದು. ಹಲವಾರು ದೇವತೆಗಳನ್ನೊಪ್ಪುತ್ತಾ, ಆ ಎಲ್ಲಾ ದೇವರ ಮೂಲವೂ ಒಂದರಲ್ಲಿಯೇ ಅಡಕವಾಗಿದೆ – ಇದೇ ಸತ್ಯದರ್ಶನ ಅಂತ ಮುಕ್ತಾಯ ಹಾಡಿದ್ರು.

ರತ್ನ, ರಾಮಮೂರ್ತಿ
ಹರಟೆ ಭಾಗಿಗಳು.

* ನನ್ನದೊಂದು ಹಿನ್ನುಡಿ:

ನಮ್ಮ ಈ ಹರಟೆಯಲ್ಲಿ ಬಂದ ಏಕೇಶ್ವರ ವಾದ, ಬಹುದೇವತಾ ವಾದ ನಮ್ಮ ಅನಿಸಿಕೆಗಳು ಮಾತ್ರ. ಇದನ್ನು ಆಧಾರವಾಗಿ ಪರಿಗಣಿಸದೆ ಒಂದು ಹರಟೆಯ ಮಟ್ಟದಲ್ಲಿ ಅಥವಾ ನಾವು ಅಂದುಕೊಂಡಿರುವಂತೆ ಒಂದು ಚಿಂತನ ಮಂಥನಕ್ಕೆ ಸೀಮಿತವಾಗಿ ಅರ್ಥೈಸಿಕೊಳ್ಳಬೇಕು. ಹಿರಿಯರ ಮನದಾಳದ ಮಾತು, ಅನಿಸಿಕೆಗಳು ಹೇಗಿರುತ್ತೆ, ಹೇಗಿತ್ತೆಂದು ನನ್ನ ಮನದಲ್ಲಿ ಯಾವುದಾದರೂ ಒಂದು ವಿಷಯ ಹಾದು ಹೋದಾಗ, ನಮ್ಮ ಹರಟೆ ಯಲ್ಲಿ ಈ ವಿಷಯ ಬಂದಿತ್ತೇ, ಬಂದಿದ್ದರೆ ಹೇಗಿತ್ತು ಎಂಬುದನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿರುತ್ತೇನೆ. ನಮ್ಮ ಹಾಗೂ ಸ್ನೇಹಿತ ಚಿದಂಬರನ ತಾಯಿಯವರೂ ಹೆಚ್ಚು ಓದಿಕೊಂಡವರಲ್ಲ. ಇಬ್ಬರೂ middle school ಮೆಟ್ಟಲು ಹತ್ತಿದವರು – ಅಷ್ಟೇ. ಅವರ ಅನುಭವದ ಮಾತು ಅಥವಾ ನಮ್ಮ ಹರಟೆಯಲ್ಲಿ ಒಂದು ವಿಷಯ/topic ಬಂದರೆ ಅದನ್ನು ಅವರು, ಅನುಭವಾತ್ಮಕ ವಿಮರ್ಶೆ ಗೊಳಪಡಿಸಿಕೊಂಡು ಹೇಳುತ್ತಿದ್ದ ರೀತಿ ನಮ್ಮನ್ನು ಮುಗ್ಧರನ್ನಾಗಿಸುತ್ತಿತ್ತು. ಇದನ್ನೇ ಪೂರಕವಾಗಿಯೋ, ಆಧಾರವೆಂದೋ ಪರಿಗಣಿಸಬಾರದಾಗಿ ನಮ್ಮ ಹರಟೆ ಕಟ್ಟೆಯ ಭಾಗಿಗಳೆಲ್ಲರ ಪರವಾಗಿ ವಿನಂತಿಸಿಕೊಳ್ಳುತ್ತೇನೆ. ಇದನ್ನು ನಮ್ಮ ಹಾಗೂ ಸ್ನೇಹಿತ ಚಿದಂಬರನ ತಾಯಿಯವರೂ ಹೇಳುತ್ತಿದ್ದರು. ನಮ್ಮ ಹರಟೆಯಲ್ಲಿ ಬಂದಿರಬಹುದಾದ ವಿಷಯಗಳನ್ನು ಚಿಂತನ ಮಂಥನಕ್ಕೆ ಒಳಪಡಿಸಿ, ಪುಸ್ತಕಗಳನ್ನೋ , ಅಂತರ್ಜಾಲದಲ್ಲೋ ಪೂರಕ, ಆಧಾರಿತ ಮಾಹಿತಿ ಸಂಗ್ರಹಿಸಿ ತಪ್ಪು ಒಪ್ಪುಗಳನ್ನು ಗ್ರಹಿಸಿ. ನಮಗೂ ತಿಳಿಸಿ. ನಾವೂ ಸಂಭ್ರಮಿಸುತ್ತೇವೆ.

One thought on “Monotheism and Polytheism (Author: RamaMurthy)

  1. This design is wicked! You certainly know how to keep a reader entertained. Between your wit and your videos, I was almost moved to start my own blog (well, almost…HaHa!) Wonderful job. I really enjoyed what you had to say, and more than that, how you presented it. Too cool!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s