Holi, the Festival of Colors (Author: RamaMurthy)

ಇಂದು ಹೋಳಿ ಹುಣ್ಣಿಮೆ…

ಕಥೆಗಳು ಬೇಕಾದ್ರೆ ಮುಂದೆ ಓದಿ . .

ಕಾಫಿ ಕುಡೀತಾ, ಶುರುಮಾಡ್ಕೊಳೇ ಕಥೇನ ಪದ್ಮ, ಈ ಹುಡುಗ್ರು ಗೊತ್ತಿದ್ಕೇಳ್ತಾರೋ, ಗೊತ್ತಿಲ್ದೇ ಕೇಳ್ತಾರೋ, ನಾವಂತೂ ನಮಗ್ಗೊತ್ತಿರೋದನ್ನ ಹೇಳೋಣ ಅಂದ್ರು. ನಾವೆಲ್ಲಾ ಸುಮ್ನೆ ನಕ್ವಿ.

ನೋಡಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರ್ಸ್ತೀವಿ. ನೀವೂ, ಸ್ವಲ್ಪ ಪಂಚಾಗ ನೋಡೋದ್ ಕಲ್ತ್ಕೊಳ್ರೋ. ಅಂತ ಹೇಳ್ತಾ , ಉತ್ತರ ಭಾರತದಲ್ಲಿ ಈ ಹಬ್ಬ ಜೋರು. ನಾನು, ಡೆಲ್ಲಿಗ್ಹೋಗಿದ್ದಾಗ ನೋಡಿದ್ಯಿನ್ನೂ ಜ್ಞಾಪಕದಲ್ಲಿದೆ. ಅಲ್ಲಿ ಎಲ್ರೂ ಅಂದ್ರೆ ಎಲ್ಲಾ ಮತದವರೂ ಭಾಗವಹಿಸ್ತಿದ್ರು. ಈಗ ನಂಗೆ ಗೊತ್ತಿಲ್ಲ. ಅಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವಕೊಡ್ತಾರೆ. ಅಲ್ಲಿ, ಬಿದಿರು, ಬೊಂಬು ಗಳಿಂದ ಹತ್ತು ತಲೆ ರಾವಣನ್ಮಾಡಿ , ಅದಕ್ಕೆ ಹಳೆ ಬಟ್ಟೆಗಳನ್ತುರ್ಕಿ, ಬಣ್ಣ, ಸುಣ್ಣ ಎಲ್ಲಾ ಬಳ್ದು , ಸುಡೋದೇ ಒಂದು ಸಂಭ್ರಮ.

ಕೆಲವು ಕಡೆ, ಹಳ್ಳಿಗಳಲ್ಲಿ, ಅವತ್ತು, ಊರಿನವರ ಮನೆಯಲ್ಲಿರೋ, ಸೌದೆ, ಬೆರಣಿ ಜೊತೆ ಬೇಡ್ಡಲೇ ಇರೋ ವಸ್ತು ಗಳನ್ನೆಲ್ಲಾ ಯಾವ್ದಾದ್ರೂ ಮೈದಾನದಲ್ಲಿ ಗುಡ್ಡೆ ಹಾಕಿ, ಯಾವ್ದಾದ್ರು ಒಬ್ಬ ಹುಡ್ಗನಿಗೆ, ಶಿಖಂಡಿ ವೇಷ ಹಾಕ್ಸಿ, ಒಂದೈದಾರು ಮನೆನಲ್ಲಿ ಭಿಕ್ಷೆ ಬೇಡ್ಸಿ, ಆಮೇಲೆ ಅವನಿಂದ್ಲೇ ಗುಡ್ಡೆಗೆ ಬೆಂಕಿ ಹಾಯ್ಸಿ, ‘ಕಾಮ ದಹನ’ – ಹಬ್ಬ ಆಚರಿಸ್ತಾರಂತೆ. ನಮ್ಮಜ್ಜಿ ಹೇಳ್ತಿದ್ರು.

ಹಾಗೇನೇ, ಹೋಳಿ ಆಚರಣೆ ಭಾರತ ಮಾತ್ರವಲ್ಲದೆ, ಜಗತ್ತಿನ ಇತರೆ ರಾಷ್ಟ್ರಗಳಲ್ಲೂ ಅಲ್ಲಿಯವರೂ,ನಮ್ಮವರೂ ಸೇರಿ ಆಚಾರಿಸ್ತಾರೆ ಅಂತಾನೂ ಹೇಳ್ತಾರಪ್ಪ. ಯಾವತರ ಆಚರಿಸ್ತಾರೋ ಗೊತ್ತಿಲ್ಲ. ಬಣ್ಣ ಎರಚಾಡೋದು ಅಂದ್ರೆ ಎಲ್ರಿಗೂ ಇಷ್ಟ ಅಲ್ವ.

ಹಾಗೇನೇ , ರಾಧೆ ತನ್ನ ಗೋಪಿಕೆಯರೊಂದಿಗೆ ಹೋಳಿ ಆಚರಿಸಿ ಸಂಭ್ರಮ ಪಡ್ತಿದ್ಲು ಅಂತಾನೂ ಯಾವ್ದೋ ಹರಿಕಥೇಲಿ ಕೇಳಿದ್ನಪ್ಪ ಅಂತ ಸೇರ್ಸಿದ್ರು.

ನಮ್ಮಲ್ಲೀಗ, ಮೈದಾನ್ವೂ ಇಲ್ಲ, ಸೌದೆ, ಬೆರಣಿ ಮೊದ್ಲೇ ಇಲ್ಲ. ಅವತ್ತು ಹಬ್ಬ ಅಂತ ಜ್ಞಾಪಿಸಕ್ಕೆ, ಎಲ್ರು ಬಣ್ಣ ಎರಚೋಕ್ಬರ್ತಾರೆ.

ಹಿಂದೆಲ್ಲಾ,ಹುಡುಗ್ರು, ಬಿದ್ರಿನಮೆಳೆ ಹುಡ್ಕೊಂಡ್ಹೋಗಿ, ಹದವಾದ ಬಿದಿರಿನ ಪಿಚ್ಕಾರಿ ತಯಾರ್ಸ್ಕೊಳೊವ್ರು. ನಾವು, ಅಕ್ಕಿ ಹಿಟ್ಟಿಗೆ ಸ್ವಲ್ಪ ಮೈದಾಹಿಟ್ಟೋ, ಗೋಧಿ ಹಿಟ್ಟೋ ಬೆರಸಿ, ನೀರಲ್ಕದ್ರಿ ಅದಕ್ಕೆ, ಅರಿಶಿನ, ಕುಂಕುಮ, ಚಂದ್ರ ಅಂತೆಲ್ಲಾ ಬೆರಸಿ, ಯಾವ್ದಾದ್ರೂ ಸೊಪ್ಪಿನ್ರಸ ಸೇರಿಸಿ, ಹಸ್ರು, ಕೆಂಪು, ಹಳ್ದಿ ಅಂತೆಲ್ಲಾ ಬಣ್ಣ ಬಣ್ಣದ ನೀರನ್ನ ತಯಾರಿಸ್ತಿದ್ವಿ. ಹುಡುಗರೂ, ಬಿದ್ರಿನ ಪಿಚ್ಕಾರಿನಲ್ಲಿ ಬಣ್ಣದ ಆಟ ಆಡ್ತಿದ್ರು. ಈಗೆಲ್ಲಿದೆ ಆ ಸಂಭ್ರಮ. ಈಗೆಲ್ಲಾ ಪ್ಲಾಸ್ಟಿಕ್ ಪಂಪ್, ready made ಬಣ್ಣ.

ಅಷ್ಟರಲ್ಲಿ, ಚಿದಂಬರನ ತಾಯಿ – ಏ ನೀನು ಕಥೆನೇ ಹೇಳ್ತಿಲ್ವಲ್ಲೇ?. ಬೇರೇನೆ ಕಥೆ ಹೇಳ್ತಿದೀಯ ಅಂದ್ರು.

ಆಯ್ತಮ್ಮಾ, ಅವ್ರಿಗೆಲ್ಲಾ ಗೊತ್ತಿರುತ್ತೆ. ಸ್ವಲ್ಪದ್ರಲ್ಲಿ ನಾನೊಂದ್ಕತೆ ಹೇಳ್ತೀನಿ ನಿನೊಂದ್ಹೇಳು ಅಂದ್ರು.

ನೀನೇ ಹೇಳೇ ಪರವಾಗಿಲ್ಲ ಯಾರ್ಹೇಳಿದ್ರೇನು ಅಂದ್ರು .

ಹಾಗಾದ್ರೆ ಎಷ್ಟ್ ಕಥೆ ಇದೆ ಅಂತ ಯಾರೋ ಕೇಳಿದ್ರು. ನಂಗೊತ್ತಿರೋ ಹಾಗೆ ಎರಡು, ಮತ್ತೆಷ್ಟಿದ್ಯೋ ಗೊತ್ತಿಲ್ಲ.

ನಮ್ಮಲ್ಲಿ ಕಥೆಗೇನ್ ಬರವಿಲ್ಲ ಅಂದ್ರು. ಕಾಮನಹುಣ್ಣಿಮೆ ಗೆ ಪೂರಕವಾದ ಒಂದು, ಹೋಳಿಹಬ್ಬ ಅನ್ನೋದಕ್ಕೆ ಪೂರಕವಾದದ್ದೊಂದು ಹಿರಣ್ಯಕಶಿಪು ಪ್ರಹ್ಲಾದನ ಕಥೆ.

ತಾರಕಾಸುರನೆಂಬ ರಾಕ್ಷಸ ರಾಜ, ರಾಕ್ಷಸ ಅಂದ್ಮೇಲೆ ಅವನ (ಅವ)ಗುಣಗಾನ ಮಾಡೋದೇನ್ಬೇಡ, ಲೋಕಕಕಂಟಕ ಅಂದ್ರೆ ಸಾಕು.
ಈತ ಬ್ರಹ್ಮನಿಂದ, ತನಗೆ ಮರಣವು ಬಾರದಿರಲಿ, ಬಂದರೂ, ಈಶ್ವರ ಪಾರ್ವತಿಯರಿಗೆ ಜನಿಸಿದ 7ದಿನದ ಮಗುವಿನಿಂದ ಬರಲಿ ಅಂತ ವರಪಡ್ಕೊಂಡಿರ್ತಾನೆ. ಅಷ್ಟ್ಹೊತ್ಗಾಗ್ಲೇ ದಕ್ಷಯಜ್ಞ ಮುಗ್ದು, ಈಶ್ವರ, ದಾಕ್ಷಾಯಿಣಿ (ಪಾರ್ವತೀ) ಬೇರೆಬೇರೆ ಕಡೆ ತಪಸ್ಸಿಗೆ ಕೂತ್ಕೊಂಡಿರ್ತಾರೆ. ಗೊತ್ತಲ್ಲಾ ಈಗ, ತಪೋ ಭಂಗ ಆಗ್ಬೇಕು. ರಂಭೆ, ಊರ್ವಶಿ ಅಪ್ಸರೆಯರು ಸರಿಹೋಗಲ್ಲ ಅಂತ ದೇವತೆಗಳೆಲ್ಲಾ ಮನ್ಮಥ (ಕಾಮ) ನ ಮೊರೆ ಹೋಗ್ತಾರೆ. ಲೋಕ ಕಲ್ಯಾಣಕ್ಕಾಗಿ, ಅವನೂ ಒಪ್ಕೋತಾನೆ. ಮುಂದಿಂದು ಗೊತ್ತಲ್ಲಾ, ಈಶ್ವರ ತಪೋ ಭಂಗವೇನೋ ಆಗುತ್ತೆ.
ಈಶ್ವರ, ಕ್ರೋಧದಿಂದ ತನ್ನ ಮೂರನೇ ಕಣ್ಣನ್ನ ತೆರೆದು ಮನ್ಮಥ (ಕಾಮ) ನನ್ನ ಸುಟ್ಟು ಭಸ್ಮ ಮಾಡ್ತಾನೆ. ಮನ್ಮಥ (ಕಾಮ) ನ ಪತ್ನಿ, ರತೀ ದೇವಿ, ತನ್ನ ಪತಿಯ ತಪ್ಪಿಲ್ಲ, ದೇವಾನುದೇವತೆಗಳ ಕೋರಿಕೆಯ ಮೇರೆಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಹೀಗೆ ಮಾಡಬೇಕಾಯ್ತು ಅಂತ ಕೇಳಿಕೊಳ್ತಾಳೆ. ಆಗ, ಈಶ್ವರ, ಅವನು ಅನಂಗನಾಗಿ (ಬೇರೆ ಯಾರಿಗೂ ಕಾಣಿಸದೆ), ನಿನಗೆ ಮಾತ್ರ ಕಾಣಿಸುತ್ತಾ ಬದುಕಿರ್ತಾನೆ ಅಂತ ಅಭಯ ವರ ಕೊಡ್ತಾನೆ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ” ಅಂತ ಆಚರಿಸ್ತಾ ಬಂದಿದೀವಿ, ಅನ್ನೋದು ಒಂದು ಪುರಾಣ ಕಥೆ.

ತಾರಕಾಸುರ ವಧೆ ಬಗ್ಗೆ ಹೇಳ್ತಾ ಕುತ್ಕೊಳೋಲ್ಲ, time ಸಾಕಾಗೋಲ್ಲ. ನಮಗೆ Bus, auto ಯಾವ್ದು ಸಿಗಲ್ಲ.

ಎರಡನೇ ಕಥೇನೂ ಸ್ವಲ್ಪದ್ರಲ್ಲಿ ಹೇಳಿಬಿಡ್ತೀನಿ.

ಹಿರಣ್ಯಕಶ್ಯಪು, ಪ್ರಹ್ಲಾದನ ಕಥೇಲಿ ಬರುತ್ತೆ. ಗೊತ್ತಲ್ಲಾ, ಹಿರಣ್ಯಕಶ್ಯಪು ಶ್ರೀಹರಿ ದ್ವೇಷಿ. ಅಲ್ಲದೇ ತಾನೇ ದೇವರು, ತನ್ನನ್ನೇ ಎಲ್ಲರೂ ಪೂಜಿಸಬೇಕು ಎಂಬ ಧೋರಣೆ. ಪ್ರಹ್ಲಾದ ತದ್ವಿರುದ್ಧ. ಶ್ರೀಹರಿಪ್ರಿಯ, ಪರಮ ಭಕ್ತ. ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಗಣಿಸಿದವನು. ಹೀಗಿರುವಾಗ, ಹಿರಣ್ಯಕಶ್ಯಪು, ಕ್ರೋಧದಿಂದ ತನ್ನ ಮಗನನ್ನೇ ಕೊಲ್ಲಲು ನಿಶ್ಚಯಿಸಿ, ನಾನಾ ವಿಧದ ಪ್ರಯತ್ನಗಳನ್ನು ಮಾಡಿ,ವಿಫಲನಾಗಿ, ಅಗ್ನಿಕುಂಡಕ್ಕೆ ಹಾಕಲು, ತನ್ನ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗ್ತಾನೆ. ಅವಳ ಹತ್ರ fire resistant cloth ( ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ) ಇರುತ್ತಂತೆ. ಅಣ್ಣನ ಅಣತಿಯಂತೆ, ಅವಳೂ ಬಾಲ ಪ್ರಹ್ಲಾದನನ್ನು ಹೊತ್ಕೊಂಡು ಅಗ್ನಿಕುಂಡಕ್ಕೆ ಹಾರ್ತಾಳೆ. ಆಗ, ಅವಳ ವಸ್ತ್ರವು ಹಾರಿಹೋಗುತ್ತೆ, ಹೋಳಿಕಾಳ ದಹನವಾಗುತ್ತೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ. ಅದು ನಡೆದದ್ದು, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಎಂದು ನಂಬಿಕೆ. ಹಾಗಾಗಿ, ಹೋಳಿ(ಕಾ) ಹಬ್ಬ ಅಂತ ಆಚರಣೆಗೆ ಬಂದಿದೆ.

ಅಷ್ಟರಲ್ಲಿ, ಯಾರೋ, ಹೋಳಿಕಾಳನ್ನ ಯಾಕೆ ಇಲ್ಲಿ ಕರೀ ಬೇಕಿತ್ತು, ಸಾಯ್ಸಬೇಕಿತ್ತು, ಹಾಗೇ, ಅವ್ನನ್ನೇ ಅಗ್ನಿಕುಂಡಕ್ಕೆ ಹಾಕ್ಬಹುದಿತ್ತಲ್ವಾ? ಅಂದ್ರು.

ನೋಡ್ರೋ, ನಮ್ಗೆಲ್ಲಾ, ನಮ್ಮ ಕಾಲದಲ್ಲಿ ಹೀಗೆಲ್ಲಾ,ಕೇಳೋಕ್ಕೆ ಭಯ ಆಗ್ತಿತ್ತು. ನೀವು ಎಷ್ಟು ಸಲೀಸಾಗಿ ಕೆಳ್ತಿದೀರಾ.

ಅವ್ನೊಬ್ಬನ್ನೇ ಅಗ್ನಿಕುಂಡಕ್ಕೆ ಹಾಕಿದ್ರೆ, ವಿಷ್ಣು ಅವ್ನನ್ನ ಬೀಳ್ದಹಾಗೆ ತಡೀತಿದ್ನೋ, ಹಿಡ್ಕೋತಿದ್ನೋ ಏನೋ ಮಾಡ್ತಿದ್ದ ಅಂತ ಇರ್ಬಹುದು. ಅಥವಾ ಹೋಳಿಕಾಳೂ ಲೋಕ ಕಂಟಕಳಾಗಿದ್ದಿರಬಹುದು, ಅವಳನ್ನೂ ಸಾಯಿಸುವ ಉದ್ದೇಶವಿದ್ದಿರಬಹುದು. ಏನೋ ಒಂದು.

ಮತ್ತೊಬ್ರು, ಇಷ್ಟೇನಾ, ಇನ್ನೂ ಬೇರೆ ಕಥೆಗಳಿವ್ಯಾ ಅಂದ್ರು.

ಇದೆ ಕಣ್ರೋ, ಯಾವ್ದೋ ಇನ್ನೊಂದೆರ್ಡು ಜ್ಞಾಪಕಕ್ಕೆ ಬರ್ತಿದೆ, ಆದ್ರೆ time ಇಲ್ಲ.

ಪರ್ವಾಗಿಲ್ಲ, ಸ್ವಲ್ಪದ್ರಲ್ಲೇ ಹೇಳಿ ಅಂದ್ರು.

ಹೇಳ್ತೀನಿ, ಕಥೆ ಕೇಳಿ ನಗ್ಬೇಡಿ.

ಒಂದೂರಲ್ಲಿ, ದುಂಡಾನೋ, ದೌನ್ದಾನೋ ಹೆಸರಿನ ಒಬ್ಬ ರಾಕ್ಷಸಿ ಇರ್ತಾಳೆ. ಇವಳ ಕೆಲಸ ಏನು ಅಂದ್ರೆ, ಹೊಸ ಹೊಸ ರೋಗ ಬರ್ಸೋದು, ಹರಡಿಸೋದು, ಖಾಯಿಲೆ ಬಂದು ಒದ್ದಾಡೋರನ್ನ ನೋಡಿ ಖುಷಿಪಡೋದು. ಇವ್ಳು, ಏನ್ಮಾಡಿದ್ರೂ ಊರ್ಬಿಟ್ಟು ಹೋಗ್ತಿರ್ಲಿಲ್ಲ. ಮಂತ್ರ ತಂತ್ರಕ್ಕೆ ಬಗ್ತಿರ್ಲಿಲ್ಲ. ಕೊನೇಗೆ, ಊರವ್ರೆಲ್ಲಾ ಅವಳನ್ನ ಓಡಿಸ್ಕೊಂಡ್ಹೋಗಿ, ಊರಹೊರಗೆ ಬಿಟ್ಟು, ಉರಸುತ್ತಾ ಬೆಂಕಿ ಹಾಕಿದ್ರಂತೆ. ಆಮೇಲೆ, ಅವಳು ಮತ್ತೆ ಬರ್ಲಿಲ್ವಂತೆ.

ಇನ್ನೊಂದು,

ನಮ್ಮ ಉತ್ತರ ಭಾರತದ ಕಡೆ ಆಚರಣೇಲಿ ಇದೆ ಅಂತಾರಪ್ಪ. ಎಲ್ಲಿ, ಏನು ಅಂತ ನಂಗಂತೂ ಗೊತ್ತಿಲ್ಲ. ಕಥೆ ಹೇಳ್ತೀನಿ ಅಷ್ಟೇ. ಮನೇಲಿ, ಸಣ್ಣ ಮಗು ಇದ್ರೆ, ಇಲ್ದಲೆ ಇದ್ರೆ, ಪುಟ್ಟ ಬಾಲಕೃಷ್ಣನ ಗೊಂಬೇನ ಹುಣ್ಣಿಮೆ ಹಿಂದಿನ ಮೂರು ದಿವ್ಸ ತೊಟ್ಳಲ್ಲಿ ಮಲಗಿಸಿ, ಆರತಿ ಅಥವಾ ಉತ್ಸವದ ರೀತಿ ಆಚರಸಿ, ಹುಣ್ಣಿಮೆ ದಿನ ಪೂತನೀ ರಾಕ್ಷಸಿಯ ಗೊಂಬೆ, ಪ್ರತಿಕೃತಿ ಮಾಡಿ, ರಾತ್ರೆ ಅದನ್ನ ಸುಟ್ಟು ಸಂಭ್ರಮಿಸ್ತಾರಂತೆ.

ಇನ್ನೂ ಒಂದು, ಜ್ಞಾಪಕಕ್ಕೆ ಬರ್ತಿದೆ.

ದಕ್ಷಿಣ ಭಾರತದ ಕಡೆ ಅಂತಾರೆ. ಶಂಕರಾಚಾರ್ಯರು, ಒಮ್ಮೆ ತಪಸ್ಸು ಮಾಡ್ತಿದ್ದಾಗ, ಅವರ ಮನಸ್ನಲ್ಲಿ ಮನ್ಮಥ ಬಂದು, ತಪೋಭಂಗ ಮಾಡಲು ಪ್ರಯತ್ನಿಸಿದ. ಅವರು ಅವನನ್ನು, ಅಂತರ್ಯದಲ್ಲೇ ಸುಟ್ಟು ಹಾಕಿದ್ರು ಅಂತ ಹೇಳ್ತಾರೆ.

ಒಟ್ನಲ್ಲಿ, ಕಥೆ ಕಥೆಯಾಗೇ ಇರ್ಬೇಕು, ಕೇಳ್ಬೇಕು ಅಷ್ಟೇ ಕಣ್ರೋ, ಅಂದ್ರು.

ಚಿದಂಬರನ ಅಮ್ಮ, ಹೌದ್ರೋ ಅದರ ಒಳಾರ್ಥ ಮುಖ್ಯ. ನಮ್ಮಲ್ಲಿರೋ ಕಾಮ, ಕ್ರೋಧ, ದುಷ್ಟ ಪ್ರವೃತ್ತಿ, ಕೆಟ್ಟಗುಣಗಳನ್ನೆಲ್ಲಾ ಮನ್ಮಥ (ಕಾಮ) ನಲ್ಲಿ ಆವಾಹಿಸಿ ಸುಟ್ಟು ಹಾಕ್ಬೇಕು , ದಹನ ಮಾಡ್ಬೇಕು ಅನ್ನೋದು ಈ ಹಬ್ಬದ ಮುಖ್ಯಸಂವಹನ. ಆಚರಣೆ. ಆಚರಣೆ ಬಗ್ಗೆ ನಾನೂ ಸ್ವಲ್ಪದ್ರಲ್ಲಿ ಹೇಳ್ತೀನಿ ಕಣ್ರೋ ಅಂದ್ರು .

ಹುಣ್ಣಿಮೆದಿನ, ಸಾಯಂಕಾಲ ಪದ್ಮ ಹೇಳ್ದಹಾಗೇ, ಕಾಮದಹನ. ದಹನಾ ನಂತರ, ಭಾಗಿಗಳೆಲ್ಲಾ ಅದಕ್ಕೆ ಮೂರು ಪ್ರದಕ್ಷಿಣೆ ಹಾಕ್ತಾರೆ. ಆಮೇಲೆ, ಎಲ್ರಿಗೂ ಹಣ್ಣು ಹಂಪ್ಲು ಅಂತಾನೋ, ಕಡ್ಲೇಪುರಿನೋ ಹಂಚ್ತಾರೆ.

ಮಾರನೇ ದಿನ ಬೆಳಗ್ಗೆ ಮತ್ತೆ ಆ ಜಾಗಕ್ಕೆ ಹೋಗಿ, ಬೂಧಿ ತಗೊಂಡು ಹಣೇಗೆ ಹಚ್ಕೋತಾರೆ. ಆಮೇಲೆ ಹೋಳಿ ರಂಗಿನಾಟ. ಬಣ್ಣ ಎರಚಾಟ. ಇದರಲ್ಲಿ, ಎಲ್ಲಾರೂ, ಎಲ್ಲರಿಂಗೂ ಯಾರು ಯಾರಿಗೆ ಬೇಕಾದ್ರೂ ಬಣ್ಣ ಹಚ್ಚಬಹುದು. ರಂಗಿನಾಟವೆಲ್ಲಾ ಮುಗಿದಮೇಲೆ ಎಲ್ರೂ ಅಭ್ಯಂಜನ ಸ್ಶಾನ ಮಾಡೋದು.
ಇಷ್ಟು ತಿಳ್ಕೊಂಡಿರಿ ಹುಡುಗ್ರಾ. ಬರೀ ಬಣ್ಣ ಎರಚಾಟ ಉಳ್ಕೊಂಡಿದೆ ನಮ್ಮಲ್ಲಿ. ಕಥೆ, ಆಚರಣೆನೂ ಗೊತ್ತಿರ್ಲಿ ಅಂತ ಇಷ್ಟೆಲ್ಲಾ ಹೇಳಿದ್ವಿ. ಇನ್ನು ಹೊರಡಿ, bus ಅಂತೂ ಸಿಗಲ್ಲಾ, ಆಮೇಲೆ Autoನೂ ಸಿಗದೇ ಇದ್ರೆ ಕಷ್ಟ ಅಂದ್ರು. ನಾವೂ ಹೊರಟ್ವಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s