Influencers in Our Life (Author: RamaMurthy)

The following blog you are going to read is written by my Uncle (Chikkappa ಚಿಕ್ಕಪ್ಪ), Mr. RamaMurthy who is a key contributor to this blog-site. Not only that, he is the one who inspired me to start this blog-site! Thank you, Chikkappa…

The article below is in our Mother-tongue Kannada language. He writes about his experience on his very first job and how the Manager he worked with influenced his life not just from a career-growth perspective, but ignited the spark for inner spiritual growth.

Throughout our life, we come in contact with so many people who have an impact on our life in one way or the other. We just have to keep our eyes and mind open and be receptive to the positive things and constructive feedback that we receive from everyone around us.


Now, to the actual blog…

*********************************
ನನ್ನ ಉದ್ಯೋಗದ ಮೊದಲ ಪರ್ವದ ಅನುಭವ

ಶುಭೋದಯ, ಹರಿಃ ಓಂ …

ನೀವು, ವಿಷ್ಣುಸಹಸ್ರನಾಮದ ಒಂದೆರಡು ಶ್ಲೋಕಗಳನ್ನ ದಿವಸಾ ಬರಿಯುತ್ತಾ ಹೋಗೋಣ ಅಂದಾಗ ತಕ್ಷಣ ಒಪ್ಪಿಕೊಂಡೆ, ಹಾಗೂ ಪೂರ್ಣಗೊಂಡ ಈ ಸಂದರ್ಭದಲ್ಲಿ, ನನಗೆ ಈ ಅಧ್ಯಾತ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹುಟ್ಟಲು ಕಾರಣವಾದವರ ಬಗ್ಗೆ ಹೇಳ್ತಿದೀನಿ.

ಸುಮಾರು 50 ವರ್ಷಗಳ ಅನುಭವ…
ನಾನು ಕೆಲಸಕ್ಕೆ Chowgulesಗೆ ಸೇರಿದ ಹೊಸದು. ಗೋವಾದಲ್ಲಿ (ವಾಸ್ಕೊಡಿಗಾಮ) ಕೆಲಸ ಮಾಡುತ್ತಿದ್ದಾಗ, ಶ್ರೀ. ವೆಂಕಟ ರಾಮನ್ ಅನ್ನುವವರು Chief Admn. officer ಆಗಿದ್ರು:

 • ಸುಮಾರು 35 – 40 ವರ್ಷ, well experiened.
 • Office ನಲ್ಲಿ ತುಂಬಾ strict ಮತ್ತು good administrator ಆಗಿದ್ದ ಮನುಷ್ಯ.
 • ಎಲ್ಲರೂ ಅವರನ್ನ ಕಂಡ್ರೆ officeನಲ್ಲಿ ಹೆದರ್ತಿದ್ರು. ನಾವೋ, technical side ಕೆಲಸ ಮಾಡೋವ್ರು, office administration ಕಡೆ ತಲೆ ಕೆಡಿಸಿಕೊಳ್ತಿರ್ಲಿಲ್ಲ. ಹಾಗಾಗಿ, Office ನಲ್ಲಿ ಸಣ್ಣ ಪುಟ್ಟ ತಪ್ಪುಗಳಾಗಿ ನಾನೂ ಬೈಸಿಕೊಂಡಿದ್ದಿದೆ. ತಪ್ಪುಗಳನ್ನು ತಿದ್ದಿ ತಿಳಿ ಹೇಳ್ತಿದ್ರೂ, ಗಂಟಲು ಜೋರು!

 ಇರಲಿ, ಈತ office management ಅರ್ಥ ಮಾಡಿಕೊಂಡಿದ್ದ ಹಾಗೆ ಜೀವನವನ್ನೂಅರ್ಥ ಮಾಡಿಕೊಂಡಿದ್ದಾತ:

 • ಆಫೀಸ್ ಮುಗಿದಮೇಲೆ, ಸಂಜೆ 7 ಗಂಟೆಗೆ ಸರಿಯಾಗಿ ಅಲ್ಲಿನ ಒಂದು ದೇವಸ್ಥಾನಕ್ಕೆ ಪುಣ್ಯಾತ್ಮ ಹಾಜರಾಗ್ತಿದ್ರು.
 • ಅಲ್ಲಿ ಎಲ್ಲರೊಡನ್ನೊಬ್ಬನಾಗಿ, ಭಜನೆ, ಸ್ತೋತ್ರ ಪಾಠಗಳನ್ನು ಹೇಳಿಕೊಡ್ತಿದ್ರು.
 • ಭಗವದ್ಗೀತೆಯ ಒಂದೆರಡು ಶ್ಲೋಕವನ್ನು ದಿನಾ ಎಲ್ಲರಿಗೂ ಹೇಳಿಕೊಟ್ಟು, ಬಾಯಿ ಪಾಠ ಮಾಡಿಸ್ತಿದ್ರು. ಅರ್ಥವಿವರಣೆ, ಗುಣಾತ್ಮಕ ಭಾವಾನುವಾದವನ್ನೂ ವಿವರಿಸಿ ಹೇಳ್ತಿದ್ರು.
 • ಭಾನುವಾರದಂದು, ರಾಮಾಯಣ, ಮಹಾಭಾರತದ ಯಾವುದಾದರೂ ಒಂದು ಭಾಗವನ್ನು ರಸವತ್ತಾಗಿ ವಿವರಿಸುತ್ತಿದ್ದರು
 • ಎಲ್ಲವೂ Englishನಲ್ಲೇ ವಿವರಣೆ, ಯಾರಾದರೊಬ್ಬರು ಕೊಂಕಣಿ ಭಾಷೆಗೆ translate ಮಾಡ್ತಿದ್ದದ್ದೂ ಉಂಟು.
 • ಆಧ್ಯಾತ್ಮಿಕವಾಗಿ, ವೇದ, ಉಪನಿಷದ್, ಸ್ತೋತ್ರಾದಿಗಳನ್ನು ನಿರರ್ಗಳವಾಗಿ ಉದ್ಘರಿಸುತ್ತಿದ್ರು.
 • ಸಂಗೀತ ಜ್ಞಾನವು ಇತ್ತು, ಸುಶ್ರಾವ್ಯವಾಗಿ ಕೀರ್ತನೆಗಳನ್ನ ಹಾಡ್ತಿದ್ರು, ಮರಾಠಿ ಅಭಂಗ್ ಗಳನ್ನೂ ಪೂರಕವಾಗಿ ಹಾಡ್ತಿದ್ರು.

ಇದಕ್ಕೆಲ್ಲಾ time ಹೇಗೆ ಹೊಂದಿಸ್ಕೊತಿದ್ರೋ ನಮಗೆ ಆಶ್ಚರ್ಯ ವಾಗ್ತಿತ್ತು.

ನಾನು, ಆಗ ಇನ್ನೂ ಬ್ರಹ್ಮಚಾರಿ…
   ಕೆಲಸ, ಸ್ನೇಹಿತರಜೊತೆ ಸುತ್ತಾಟ, ನಿದ್ದೆ ಇದೇ ದಿನಚರಿಯಾಗಿತ್ತು. ಮನೆಯಲ್ಲಿ ಹಾಸಕ್ಕೆ ಹೊದ್ಯೋಕೆ ಬಿಟ್ರೇ ಮತ್ತೇನೂ ಇಲ್ಲ. ಊಟ, ತಿಂಡಿ, ಕಾಫಿ ಎಲ್ಲಾ ಹೊರಗಡೆ. 9 ಗಂ ಗೆ Office ಅಂದ್ರೆ 8ಗಂ ಗೆ ಏಳ್ತಿದ್ದೆ. ಆಫೀಸ್ ಕ್ಯಾಂಟೀನ್ ನಲ್ಲೇ ಊಟ, ತಿಂಡಿ, ಕಾಫಿ ಎಲ್ಲಾ. ಭಾನುವಾರ, ಊಟದ timeಗೇ ಏಳ್ತಿದ್ದದ್ದು ಸಾಮಾನ್ಯವಾಗ್ತಿತ್ತು!

ಒಂದು ದಿನ, ನಮ್ಮ Officer ಅವರು, “ನಾಳೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಮ್ಮನೆಗೆ ಬಾ” ಅಂದಿದ್ರು. ನಾನು, ಮಾಮೂಲಿ ಬೆಳೆಗ್ಗೆ 8 ಗಂಟೆಗೆ ಎದ್ದೆ, ಅವಸರವಸರವಾಗಿ, ಸ್ನಾನದ ಶಾಸ್ತ್ರ ಮಾಡಿ, ಅವ್ರ ಮನೆಗೆ ಓಡಿದೆ. ನಮ್ಮ bachelor quartersಗೂ, ಅವ್ರ ಮನೆಗೂ ಅಷ್ಟೇನೂ ದೂರವಿರಲಿಲ್ಲ. ಅಲ್ಲಿ ಹೋದ ಕೂಡ್ಲೇ “ಕೈಕಾಲು ತೊಳ್ಕೋ” ಅಂದ್ರು. ನಾನೋ pantಧಾರಿ. ಕೈಕಾಲು ತೊಳ್ಕೊಂಡು ಬಂದೆ. ಅಲ್ಲೇ ದೇವ್ರ ಮುಂದೆ ಪಂಚೆ ಇದೆ ಉಟ್ಕೋ, ಹಣೇಗೆ ವಿಭೂತಿ ಕುಂಕುಮ ಇಟ್ಕೋ ಅಂದ್ರು. ಏನೋ ಮುಜುಗರ. ಆದ್ರೂ ಹಾಗೇ ಮಾಡ್ದೆ. ದೇವ್ರ ಮುಂದೆ ಮಣೆಯಿತ್ತು. “ಕೂತ್ಕೋ…” ಅಂದ್ರು. ಅವತ್ತು ಅವ್ರ ಮನೆಯಲ್ಲಿ ಏನೋ ವ್ರತ ಕಥೆ ಇತ್ತು ಅಂತ ಕಾಣ್ಸತ್ತೆ. ನಾನೂ ಕೇಳ್ಲಿಲ್ಲ, ಅವರೂ ಹೇಳ್ಲಿಲ್ಲ. ಕೂತ್ಕೊಂಡಮೇಲೆ, ಏನೋ ಮಂತ್ರಗಳನ್ನ ಹೇಳ್ತಾ , ನನ್ನ ಕೈಲೂ ಹೇಳಸ್ತಾ,
“ಇದಂ ವಾಯನದಾನಂ ಸ ತಾಂಬೂಲಂ ಸದಕ್ಷಿಣಾಕಂ . . . . ಇದಂ ನ ಮಮ”
ಅಂತ ಹೇಳ್ತಾ ನನಗೇ ಉಪಾಯಂದಾನ ಕೊಟ್ರು. “ಸಾರ್, ನಾನೋ ಬ್ರಹ್ಮಚಾರಿ, ತೆಂಗಿನಕಾಯಿ ಇವನ್ನೆಲ್ಲಾ ಏನ್ಮಾಡ್ಲಿ?!” ಅಂದೇ. “ನೋಡು, ನಿಮಗೆ administration ಗೊತ್ತಿಲ್ಲಾ ಅನ್ನೋದು ಇದಕ್ಕೇ. ನಂಗೆ, ನಿನಗೇ ಕೊಡ್ಬೇಕು ಅನ್ನಿಸ್ತು ಕೊಟ್ಟೆ. ನಂಗೂ ಗೊತ್ತು ನೀನು bachelor ಅನ್ನೋದು. ನೋಡು, ನೀನು ಮನೆಗೆ ಹೋಗ್ತಾ ದಾರೀಲಿ ದೇವಸ್ಥಾನ ಸಿಗತ್ತಲ್ವಾ, ಅಲ್ಲಿ ಪೂಜಾರರಿಗೆ ಇದ್ರಲ್ಲಿ ನಿಂಗೆ ಏನೇನು ಬೇಡ ಅನ್ಸುತ್ತೋ ಅದನ್ನೆಲ್ಲ ಅವ್ರಿಗೆ ಕೊಟ್ಟು ಒಂದು ನಮಸ್ಕಾರ ಹೊಡ್ದು ಮನೆಗೆ ಹೋಗು. Simple, ನಿನ್ನ problem ಆಗ solve ಆದ ಹಂಗೆ ಅಲ್ವಾ” ಅಂದ್ರು. (ಆಮೇಲೆ, ನಾನು ಅವ್ರು ಹೇಳ್ದ ಹಾಗೆ, ಅವ್ರು ಇಟ್ಟುಕೊಟ್ಟಿದ್ದ 5 ರೂ. ನೋಟನ್ನ ಜೆಬ್ನಲ್ಲಿಟ್ಕೊಂಡು, ಬಾಕಿದೆಲ್ಲಾ ಪೂಜಾರರಿಗೆ ಕೊಟ್ಟೆ, ಯಾಕೋ ಜೇಬು ಚುಚ್ಚಿದ ಹಾಗಾಯ್ತು ಆಮೇಲೆ ಆ 5 ರೂ. ನೋಟನ್ನೂ ತಟ್ಟೆಗೆ ಹಾಕಿ ನಮಸ್ಕಾರ ಮಾಡಿ ಮನೆಗೆ ಹೋದೆ).

ಮುಂದಿಂದು ಏನಾಯ್ತು ಹೇಳ್ತೀನಿ . ಅವ್ರ ಮನೆಯವರು, ತಟ್ಟೇನಲ್ಲಿ ಇಡ್ಲಿ, ವಡೇ, ಪಾಯ್ಸ, ಕೋಸಂಬರಿ ಅಂತೆಲ್ಲಾ ಇಟ್ಟುಕೊಂಡು ಬಂದು ಇಬ್ರಿಗೂ ಕೊಟ್ರು. ನಾನು, “ನಿಮಗೆ…” ಅಂದೇ. ಅವ್ರು “ಮೊದ್ಲು ಬ್ರಹ್ಮಚಾರಿ ತೃಪ್ತಿ ಆಗಬೇಕಪ್ಪಾ…” ಅಂತ ನಗ್ತಾ, ಕನ್ನಡದಲ್ಲೇ ಹೇಳಿದ್ರು. (ಅವತ್ತು ಷಷ್ಠಿಪೂಜೇ ಇದ್ದಿರಬಹುದು ಅಂತ ಈಗ ಅನ್ಸುತ್ತೆ).
ಅವ್ರಿಗೆ, ಚೆನ್ನಾಗೇ ಕನ್ನಡ ಬರ್ತಿತ್ತು. ನಗು ನಗ್ತಾ, ಮತ್ತೆ ಮತ್ತೆ ಕೇಳಿ ಬಡಿಸ್ತಾ, ಆಮೇಲೆ ಕಾಫಿನೂ ತಂದು ಕೊಟ್ರು.
ಹಾಗೆಯೇ ಮಾತಾಡ್ತಾ ಕೂತ್ಕೊಂಡ್ವಿ, “ನಿಂಗೆ ಆದಿತ್ಯ ಹೃದಯ ಸ್ತೋತ್ರ ಬರುತ್ತಾ?” ಅಂದ್ರು, ನಾನು . . . . “ಇಲ್ಲ ಆದ್ರೆ, ನಮ್ತಂದೆ ಸ್ನಾನ ಮಾಡುವಾಗ, ದಿನಾ ಹೇಳ್ಕೊತಾರೆ, ಹಾಗಾಗಿ ಸ್ವಲ್ಪ ಗೊತ್ತು ಪುಸ್ತಕ ನೋಡ್ಕೊಂಡು ಹೇಳಬಲ್ಲೆ” ಅಂದೇ.  “very good ನೋಡು, ಇದನ್ನ ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಪಠಣ ಮಾಡೋದು ಒಳ್ಳೇದು ಅನ್ನಿಸ್ತಿದೆ, ಇಲ್ಲಿಂದ ಎರಡು ಮೂರು ಕಿ. ಮೀ. ದೂರದಲ್ಲಿ ಒಂದು ಗುಡ್ಡ ಇದೆ ಅಲ್ಲಿ ಸೂರ್ಯೋದಯ ನೋಡಬಹುದು. ಆದಿತ್ಯಹೃದಯ ಸ್ತೋತ್ರ (Aditya Hrudaya) ಹೇಳ್ಕೊತಾ ಸೂರ್ಯನ ದರ್ಶನ ಮಾಡಬಹುದು ಬರ್ತೀಯಾ, walk ಆದ ಹಾಗೂ ಆಗುತ್ತೆ” ಅಂದ್ರು. ನಾನು ಸುಮ್ನಿದ್ದೆ ಏನ್ಹೇಳೋದು, ಬೇಗೇಳ್ಬೇಕು ಸ್ನಾನ ಮಾಡ್ಬೇಕು. ಅವ್ರೇ “ನಿಂಗೆ ಕಷ್ಟ ಆದ್ರೆ ಬೇಡ ನಾನಂತೂ ನಾಳೆಯಿಂದ ಹೋಗೊವ್ನೇ” ಅಂದ್ರು. “ಇಲ್ಲಾ, ಸಾರ್ ನಾನೂ ಬರ್ತೀನಿ…” ಅಂದೇ. “ಒಳ್ಳೇದು, ಆದ್ರೆ, Pant ಹಾಕ್ಕೊಂಡ್ಬರ್ಬೇಡ. ನಿನಗೆ ಇವತ್ತು ಪಂಚೆ ಕೊಟ್ಟಿದೀನಲ್ಲ, ಅದನ್ನ ಉಟ್ಕೊಂಡ್ಬಾ. ನಿನ್ನ ಪಟ್ಟಾಪಟ್ಟಿ ಲುಂಗೀಲಿ ಬರ್ಬೇಡ, ಮಲ್ಕೋಳೊಕು ಅದೇ, ಸ್ನಾನ ಅದ್ಮೇಲೂ ಅದೇ ಅಲ್ವ ನಿಂದು. ಸಂಧ್ಯಾವಂದನೆ ಮಾಡ್ತಿಯಾ . . . , ಪಂಚೇನೆ ಇಲ್ಲ ಅಂದ್ಮೇಲೆ ನೀನೆಲ್ಲಿ ಮಾಡ್ತೀಯ, . . . ಸಬಾಹ್ಯಾಭ್ಯಂತರಃಶುಚಿ: ಅಂತ ಹೇಳ್ತಿವಿ ಗೊತ್ತಾ,.ಸ್ನಾನ ಆದ್ಮೇಲೆ, ಶುಭ್ರವಸ್ತ್ರ ಧರಿಸ್ಬೇಕು, ಅಂತಃ ಶುದ್ಧಿ, ಬಹಿರ್ಶುದ್ಧಿ ಎರಡೂ ಬೇಕು, ಅದು ಮನಸ್ಸಿಗೆ ಪ್ರಸನ್ನತೆ ಕೊಡುತ್ತೆ, ಅದನ್ನೇ ನಾವು ಮಡಿ ಅನ್ನೋದು…” ಅಂದ್ರು. “ಮಲ್ಕೋಳೊಕೆ, ನಿನ್ನ ಲುಂಗಿ ಇಟ್ಕೋ, ಬೇಕಾದ್ರೆ ಇನ್ನೂ ಒಂದು ಜೊತೆ ಕೊಡ್ತೀನಿ, ದಿನಾ ಸ್ನಾನ ಆದ್ಮೇಲೆ ಶುಭ್ರವಸ್ತ್ರ ಉಟ್ಕೋಳೊದನ್ನ ಅಭ್ಯಾಸ ಮಾಡ್ಕೋ” ಅಂದ್ರು. “ಬೇಡ, ನಾನೇ ಇನ್ನೊಂದ್ಜೊತೆ ತಗೋತೀನಿ” ಅಂತ ಹೇಳ್ದೆ, ಹಾಗೆಯೇ ಅವತ್ತೇ, ಇನ್ನೊಂದ್ಜೊತೆ ಪಂಚೆ ತಗೊಂಡೆ. “OK, ನಾಳೆ ಬೆಳಿಗ್ಗೆ ಬರ್ತೀಯಲ್ವಾ, ಹಾಗೇ ನಿನ್ನ ಸ್ನೇಹಿತರೂ ಬರೋದಿದ್ರೆ ಕರ್ಕೊಂಡ್ಬಾ…” ಅಂದ್ರು.

 • ನನ್ನ room mate ಒಬ್ಬ ಬರ್ತೀನಿ ಅಂದ.
 • ಮೊದಲ ದಿನ ನಾವು ಮೂವರಾದ್ವಿ
 • ಆಮೇಲಾಮೇಲೆ 10-12 ಜನ ಆದ್ವಿ.
 • ಹೋಗುವಾಗ ವಿಷ್ಣು ಸಹಸ್ರನಾಮ ಹೇಳ್ತಾ, ಹೇಳ್ಕೊಡ್ತಾ ಕರ್ಕೊಂಡು ಹೋಗ್ತಿದ್ರು.
 • ಅಲ್ಲಿ ಒಂದು ಸಮ ತಟ್ಟಾದ ಜಾಗದಲ್ಲಿ ಕೂತ್ಕೊಂಡು ಸೂರ್ಯನ್ನ ದೃಷ್ಟಿಸ್ತಾ (sun gazing ) ಆದಿತ್ಯ ಹೃದಯ ಸ್ತೋತ್ರ ಹೇಳ್ಕೊಡ್ತಿದ್ರು, ನಾವೂ ಹೇಳ್ತಿದ್ವಿ,
 • ವಾಪಸ್ ಬರೋವಾಗ ಭಗವದ್ಗೀತೆ ಹೇಳ್ಕೊಡ್ತಾ ಇದ್ರು. 4-5 ಕಿ. ಮೀ. ನಡ್ಡಿದ್ದೇ ಗೊತ್ತಾಗ್ತಿರಲಿಲ್ಲ.

ಭಾನುವಾರ ವಾದ್ರೆ, ಎಲ್ಲರನ್ನೂ ಅವರಮನೆಗೆ ಕರ್ಕೊಂಡ್ಹೋಗಿ ಕಾಫಿ ತಿಂಡಿನೂ ಕೊಡ್ತಿದ್ರು. ಅವ್ರ ಶ್ರೀಮತಿಯವರೂ ಬೇಜಾರಿಲ್ದೆ ಉಪಚರಿಸ್ತಿದ್ರು. ನಾವೆಲ್ಲಾ ತಿಂಡಿ ತಿಂದಾದ್ಮೇಲೆ, ನಮ್ಮನಮ್ಮ ತಟ್ಟೆ ಲೋಟ ಎಲ್ಲಾ sink ನಲ್ಲಿ ತೊಳೆದು ಇಡ್ತಿದ್ವಿ. ಅವ್ರ ಮನೆಯವರು ಮಾತ್ರ – “ಬೇಡ್ರೋ ಹುಡುಗ್ರಾ… ಅಲ್ಲೇ ಇಟ್ಬಿಡಿ, ಕೆಲಸದವಳು ತೆಗಿತಾಳೆ…” ಅಂತಿದ್ರು. ನಮ್ಮ ಸಾಹೇಬ್ರು ಮಾತ್ರ – “ಏ ಸುಮ್ನಿರು, ಅದು ಒಳ್ಳೇ ಅಭ್ಯಾಸ, ನಾನು ನನ್ನ ತಟ್ಟೆ ಲೋಟ ಯಾವತ್ತಾದ್ರೂ ನಿನ್ನ ಕೈಲಿ ತೊಳ್ಸಿದಿನಾ! ನಮ್ಮ ಎಂಜಲು ತಟ್ಟೆ ಲೋಟ ಯಾಕೆ ಬೇರೆಯವರ ಕೈಲಿ ತೊಳಿಸ್ಬೇಕು? ಕೈಲಾಗಲ್ಲ, ಹುಷಾರಿಲ್ಲ ಅಂದ್ರೆ ಅದು ಬೇರೆ. ಈ ಹುಡುಗ್ರಿಗೇನಾಗಿದೆ ತೊಳ್ದಿಡಲಿ ಬಿಡು” ಅಂತಿದ್ರು.
ಆ ಅಭ್ಯಾಸ ಮಾತ್ರ ಈಗ್ಲೂ ನಡಿಸ್ಕೊಂಡು ಬರ್ತಿದೀನಿ. ಅವ್ರನ್ನ ಜ್ಙಾಪಿಸ್ಕೊತಿರ್ತೀನಿ .

ಹೀಗೇ , ಒಂದೆರಡು ತಿಂಗಳು ನಡೀತು. ನನಗೆ, ಬೇರೆ minesಗೆ transfer ಆಯ್ತು. ಅವ್ರದ್ದೇ ಸಹಿ ಮಾಡಿದ transfer memo ನನ್ನ ಕೈ ಸೇರಿತು.
ಮಾರನೇ ದಿನ ನಮ್ಮ ಮಾಮೂಲಿ walk ಹೋಗ್ತಾ “ಇನ್ನೊಂದು ವಾರ, ಮತ್ತೆ ನಮ್ಮ ಈ ಸತ್ಸಂಘ ದಿಂದ ನನ್ನನ್ನು ದೂರ ಮಾಡ್ತಿದೀರಾ…” ಅಂದೇ.
‘ನೋಡು, ಮೊದಲು ಕಾಯಕ, ಆಮೇಲೆ, ಸತ್ಸಂಘವೋ ಮತ್ತೊಂದು. ನಾವು ಎಲ್ಲಿರ್ತಿವೋ ಅಲ್ಲೇ ಸತ್ಸಂಘ ಸ್ಥಾಪಿಸ್ಕೊಬೇಕು. ನೋಡು, ನನಗೂ ನೆನ್ನೆ H L L ನ Madras branch ಗೆ appointment Order ಬಂದಿದೆ, ನಾನೂ ಇವತ್ತು Resignation ಕೊಡ್ತಿದೀನಿ. ಒಂದು ಮಾತು ಹೇಳ್ತೀನಿ, ಇವತ್ತು ನಮಗೆ ಎಷ್ಟು ಲಭ್ಯವೋ ಅಷ್ಟನ್ನ ಸಂತೃಪ್ತಿಯಿಂದ ಬಳಸಿಕೊಳ್ಳಬೇಕು, ನಾಳೆ ಅದು ಹೇಗೆ ಬರುತ್ತೋ ಹಾಗೆ ಸ್ವೀಕರಿಸಬೇಕು. Nothing is worth more than this day. Enjoy when you can, and endure when you must.” ಅಂದ್ರು.
ಅದು ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತೆ. ಒಂದು ವಾರಾ ನಂತರ, ನಾನೊಂದುಕಡೆ, ನಂತರದಲ್ಲಿ ಅವರೊಂದು ಕಡೆ…

 • ನಾನು transfer ಆಗಿ ಹೊರಟ ಕಡೆಯ ದಿನ, ಸಂಜೆ, ಅವ್ರ ಮನೆಯಲ್ಲಿ ಕಾಫಿ ತಿಂಡಿ ಕೊಟ್ಟು, ಭಗವದ್ಗೀತೆಯ ಒಂದು ಪುಸ್ತಕವನ್ನೂ ಕೈಗಿತ್ತು ಬೀಳ್ಕೊಟ್ಟಿದ್ರು. ಅದು ಇನ್ನೂ ನನ್ನಹತ್ರ ಇದೆ.
 • ಈಗಿನ ಹಾಗೆ, phone, Mobile ಗಳು ಆಗೆಲ್ಲಾ ಇರ್ಲಿಲ್ವಲ್ಲ. ನಂತರದಲ್ಲಿ, ಒಂದೆರಡು ಪತ್ರವ್ಯವಹಾರ ನಡೆಯಿತಾದ್ರೂ, ಹಾಗೆಯೇ ನಿಂತೂ ಹೋಯ್ತು.
 • ಅವ್ರು, ಈಗ ಎಲ್ಲಿದ್ದಾರೋ,ಹೇಗಿದ್ದಾರೋ ಗೊತ್ತಿಲ್ಲ. ಅವರ ವಿಕಸಿತ ವ್ಯಕ್ತಿತ್ವ ಕಣ್ಣ ಮುಂದೆ ಆಗೀಗ ಬಂದು ನಿಲ್ಲುತ್ತೆ.
 • ಅವರು, ಹೇಳ್ತಿದ್ದ ಉದಾಹರಣೆ, ಉಪಮೇಯಗಳು ನನ್ನ ಕಣ್ಣ್ಮುಂದೆ ಬರ್ತಿರುತ್ತೆ.
 • office ನಲ್ಲಿ ಸೂಟು ಬೂಟು ಧಾರಿ, ಸಿಂಹ ಘರ್ಜನೆ .
 • ಮನೆಯಲ್ಲಿ ಮತ್ತು ಹೊರಗೆ ಆಧ್ಯಾತ್ಮ ಪುರುಷ ಸದಾ ಪಂಚೆ, ಹಣೇ ತುಂಬಾ ವಿಭೂತಿ, ಕುಂಕುಮ ಸಾತ್ವಿಕ ಪುರುಷ.

ಇಂಥವರನ್ನು ನೋಡಿಯೇ ಈ ಸುಭಾಷಿತ ರಚನೆ ಮಾಡಿದ್ರೋ ಅನ್ಸುತ್ತೆ:
ನಾ ಗುಣೀ ಗುಣಿನಾಮ್ ವೇತ್ತಿ ಗುಣೀ ಗುಣೀಷು ಮತ್ಸರೀ ।
ಗುಣೀ ಚ ಗುಣರಾಗೀ ಚ ವಿರಲಃ ಸರಲೋ ಜನಃ ॥
(Those who do not have talent do not recognize other talented people and those who are talented envy other talented people. Those who are themselves talented and love other talented persons, such simple people are rare indeed).

वज्रादपि कठोराणि मृदूनि कुसुमादपि | लोकोत्तराणां चेतांसि को हि विज्ञातुमर्हति || ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ ॥

ನಾನು ಒಂದೊಂದು ವಿಷ್ಣುಸಹಸ್ರನಾಮದ ಶ್ಲೋಕವನ್ನ ಬರೆಯುವಾಗ್ಲೂ ಅವ್ರನ್ನ ಜ್ಞಾಪಿಸಿಕೊಳ್ತಿದ್ದೆ, ಅವ್ರು ಹೇಳ್ತಿದ್ದ ವಿಷಯಗಳನ್ನ ಜ್ಞಾಪಕಕ್ಕೆ ಬಂದಷ್ಟು ಬರ್ದಿಡ್ತಾ ಹೋದೆ. ಕೊನೆಯಲ್ಲಿ ಅದನ್ನ ನಿಮಗೆ ಕಳಿಸ ಬೇಕು ಅಂತಿದ್ದೆ. ಆದ್ರೆ, ಅದು 5 – 6 page ಅಷ್ಟು ಆಗಿತ್ತು. ಅದನ್ನ concise ಮಾಡಿ ಇಲ್ಲಿ ಸ್ವಲ್ಪ ಮಾತ್ರ ಹೇಳಿದೀನಿ.

ಆ ಮಹಾ ಪುರುಷರಿಗೆ ನನ್ನ ವಂದನೆಗಳನ್ನ ಅರ್ಪಿಸುತ್ತಾ, ಮರತೇ ಹೋದಂತಿದ್ದ ಅವರನ್ನು ಜ್ಞಾಪಿಸಿಕೊಳ್ಳುವಂತೆ ಮಾಡಿದ ನಿಮಗೂ ಅನಂತಾನಂತ ವಂದನೆಗಳು.

ನಾನು, Chowgule & Co.ಗೆ ಸೇರ್ಕೊ ಬೇಕೋ ಬೇಡ್ವೊ ಅಂತ ದ್ವಂದ್ವದಲ್ಲಿದ್ದಾಗ, “ಅದು ಒಳ್ಳೆಯ Geology & Mining Orgn. ನೀನು ಸೇರ್ಕೊ…” ಅಂತ ತಿಳಿ ಹೇಳಿದ, ಅಲ್ಲದೇ ಅದೇ ಕಂಪನಿಯಲ್ಲಿ Geology Dept. Chief ಆಗಿದ್ದ ಹಾಗೂ ಅವರ ಸ್ನೇಹಿತರೂ ಆಗಿದ್ದ Chittaranjan Patri ಅವರಿಗೆ ನಂತರದಲ್ಲಿ ನನ್ನನ್ನು introduce ಮಾಡಿದ್ದ ನಮ್ಮ ಚಿಕ್ಕಪ್ಪ ದಿ. ಚಂದ್ರಶೇಖರ್ ರವರು, ಎಲ್ಲವೂ ಮನದಾಳದಿಂದ ಹಾದು ಹೋಯ್ತು. ನಮ್ಮ ಚಿಕ್ಕಮ್ಮ ಗಿರಿಜಾ ರವರಿಗೆ Chittaranjan Patri ಯವರ ನೆನಪಿರಲೂಬಹುದು. ಅವರು ಮತ್ತು ನಮ್ಮ ಚಿಕ್ಕಪ್ಪ JKs ನಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ದದ್ದಾಗಿ ಹೇಳಿದ ನೆನಪು.

*********************************