MahaShivaratri, the Great Night of Lord Shiva (Author: RamaMurthy)

ॐ नमः शिवाय ||

On this auspicious day of MahaShivaratri, we present you with this blog article on the significance of this festival.

A few Wikipedia and YouTube links are given below for those interested in learning more about the festival and the powerful, energizing hymns of Lord Shiva:

Now to the blog by Sri. RamaMurthy…

*********************************

ಶುಭೋದಯ, ಶಿವರಾತ್ರಿ :

ಓಂ ತತ್ಪುರುಷಾಯವಿದ್ಮಹೇ ಮಹಾದೇವಾಯ ಧೀಮಹಿ

ತನ್ನೋರುದ್ರಃ ಪ್ರಚೋದಯಾತ್

ಓಂ ನಮಃ ಶಿವಾಯ ಶಿವಾಯ ನಮಃ ಓಂ

ರತ್ನ- ‘ನಾಳೆ ಶಿವರಾತ್ರಿ, ಏನು ಮಾಡೋಣ?‘ ಕೇಳಿದ್ಲು.
‘ನೋಡು, ನಮಗೂ, ವಯಸ್ಸಾಗ್ತಾ ಬಂತು. ಉಪವಾಸ, ಜಾಗರಣೆ ಅಂತೆಲ್ಲಾ ಶಕ್ತಿಯಿದ್ದಾಗ ಮಾಡಿಯಾಗಿದೆ. ಈಗ ಅದೆಲ್ಲಾ ಬೇಡ. ಊಟದ ಬದ್ಲು ಏನಾದ್ರೂ ಸ್ವಲ್ಪ ಉಪಹಾರ ಮಾಡು. ಹಾಗೆಯೇ ನಮ್ಮ ಕೈಲಾದ ಪೂಜೆ, ಪುನಸ್ಕಾರ ಮಾಡಿದ್ರಾಯ್ತು. ಹಾಗೆಯೇ ಬೆಳೆಗ್ಗೆ ಹಾಗೂ ಸಾಯಂಕಾಲ ಈಶ್ವರ ದೇವಸ್ಥಾನಕ್ಕೆ ಹೋಗಿ ಬರೋಣ’ ಅಂತ ಹೇಳ್ದೆ.

ಹಾಗೆ, ಶಿವರಾತ್ರಿ ಆಚರಣೆ ಬಗ್ಗೆ ವಿಚಾರಗಳು ಹಾದು ಹೋದ್ವು. ಕಥೆ, ಉಪಕಥೆ ಆಚರಣೆ ಎಲ್ಲರಿಗೂ ಗೊತ್ತೇ ಇದೆ. ಮತ್ತೊಮ್ಮೆ ಇದರ ಹಿನ್ನೆಲೆ ಹೇಳ್ತಾ ಹೋದ್ರೆ ತುಂಬಾ ಇದೆ. ಸ್ವಲ್ಪದರಲ್ಲಿ ಜ್ನಾಪಿಸಿಕೊಳ್ಳೋಣ ಅನ್ನಿಸ್ತಿದೆ.

ಇದನ್ನು ಹಬ್ಬದಂತೆಯೂ, ವ್ರತಾಚರಣೆಯಾಗಿಯೂ ಆಚರಿಸುವುದುಂಟು. – ನಮ್ಮ ಪ್ರಮುಖ ಆಚರಣೆಗಳಲ್ಲಿ ಮಾಘ ಮಾಸ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಗೆ ತುಂಬಾ ಪ್ರಾಮುಖ್ಯತೆ ಕೊಡಲಾಗಿದೆ.
ನಮ್ಮಲ್ಲಿ 12 ಸಂಕ್ರಮಣಗಳನ್ನು ಹೇಳುವಂತೆ, 12 ಶಿವರಾತ್ರಿಗಳನ್ನೂ ಹೇಳಲಾಗಿದೆ. ಪ್ರತೀ ತಿಂಗಳ ಕೃಷ್ಣಪಕ್ಷ ಚತುರ್ದಶಿಯನ್ನು ಮಾಸ ಶಿವರಾತ್ರಿ (Monthly Shivaratri) ಯೆಂದು ಆಚರಿಸಲಾಗುತ್ತದೆ. ಪಂಚಾಂಗದಲ್ಲಿ ಇದನ್ನು ನಾವು ಗಮನಿಸಬಹುದು. ಇದು ಹೆಚ್ಚಿನವರ ಮನೆಯಲ್ಲಿ ಆಚರಣೆಯಲ್ಲಿ ಬಿಟ್ಟು ಹೋಗಿರುವುದಾದರೂ, ಕೆಲವರು ಇದನ್ನು ಇನ್ನೂ ಆಚರಣೆಯಲ್ಲಿಟ್ಟುಕೊಂಡಿರುವುದು ಕಂಡು ಬರುತ್ತದೆ. ಆ ದಿನದಂದು ಸಂಜೆ ಯಾವುದಾದರೂ ಈಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಒಂದು ರೂಢಿಯೂ ಕಂಡು ಬರುತ್ತದೆ. ಯಾವುದೇ ಈಶ್ವರ ದೇವಸ್ಥಾನಕ್ಕೆ ಹೋದರೂ ಆಯಾ ತಿಂಗಳ – “ಮಾಸ ಶಿವರಾತ್ರಿ”ಯ ದಿನವನ್ನು ನಮೂದಿಸಿರುವುದನ್ನು ಗಮನಿಸಬಹುದು.

ಭದ್ರಾವತಿಯಲ್ಲಿ ನನಗೆ ನೆನಪಿರುವಂತೆ, ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತಿಂಗಳು ಸಂಜೆ/ರಾತ್ರಿ “ಮಾಸ ಶಿವರಾತ್ರಿ” ಯ ಹೆಸರಲ್ಲಿ ಏಕಾದಶ ರುದ್ರಾಭಿಷೇಕ (RudraAbhisheka) ಪೂರ್ವಕ ಎಲ್ಲರೂ ಸೇರಿ ಆಚರಿಸಲಾಗುತ್ತಿತ್ತು. ಅದು ಯಾಕೋ ನಂತರದಲ್ಲಿ ಬಿಟ್ಟು ಹೋಗಿ, ರಾಮೇಶ್ವರ ದೇವಸ್ಥಾನ (ನ್ಯೂ ಟೌನ್ ) ದಲ್ಲಿ ಸಾಮೂಹಿಕವಾಗಿ ಆಚರಣೆ ಮಾಡುವ ಪದ್ಧತಿಯಾಗಿ ಪರಿವರ್ತಿತಗೊಂಡು ಅದು ಇನ್ನೂ ನಡೆದುಕೊಂಡು ಬಂದಿದೆ.

ಪಂಚಾಂಗದಲ್ಲಿ 12 ಶಿವರಾತ್ರಿಗಳನ್ನು ಹೇಳಲಾಗಿದೆಯಾದರೂ, ಮಾಘ ಮಾಸ ಕೃಷ್ಣಪಕ್ಷ ಚತುರ್ದಶಿ ಯನ್ನು “ಮಹಾ ಶಿವರಾತ್ರಿ” ಯೆಂದು ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪೌರಾಣಿಕ ಹಿನ್ನೆಲೆ, ಕಥೆ , ನಂಬಿಕೆಗಳು ಹಲವಾರು. ಮಹಾ ಶಿವರಾತ್ರಿಯ ಬಗ್ಗೆ ಕೆಲವಾರು ಪುರಾಣಗಳಲ್ಲೂ, ಮಹಾಭಾರತದ ಭೀಷ್ಮರು ಶರಶಯ್ಯೆಯಲ್ಲಿ ಉದ್ಘರಿಸಿದ ಚಿತ್ರಭಾನುವಿನ ಕಥೆಯು ಒಳಗೊಂಡಂತೆ ಕೆಲವು ಕಥೆಗಳನ್ನು ಈ ಸಂದರ್ಭದಲ್ಲಿ ಮೆಲಕು ಹಾಕ ಬಹುದಾಗಿದೆ.
೧. ಶಿವ ಪಾರ್ವತಿ ಕಲ್ಯಾಣ
೨. ಸಮುದ್ರ ಮಥನ
೩. ಶಿವಲಿಂಗ / ಬ್ರಹ್ಮ ವಿಷ್ಣು – ಗರ್ವಭಂಗ
೪. ಲುಬ್ಢಕನ ಕಥೆ.
೫. ಗಂಗಾವತರಣ ಅಥವಾ ಭಗೀರಥನ ಕಥೆ
೬. ಸ್ವಯಂ ಈಶ್ವರನೇ ಪಾರ್ವತಿಗೆ ಹೇಳಿದನೆಂದು ಹೇಳಲಾಗುವ ಶಿವರಾತ್ರಿ ಆಚರಣೆ.

ಈ ಕಥೆ ಗಳಲ್ಲಿ ಕೆಲವು ಮಾಘ ಮಾಸ ಕೃಷ್ಣಪಕ್ಷ ಚತುರ್ದಶಿಯಂದೇ ಸಂಭವಿಸಿದ್ದೆಂದೂ ಕೆಲವು ಪೂರಕ ಕಥೆ ಗಳೆಂದು ಪರಿಗಣಿಸಲಾಗುತ್ತದೆ. ಯಾವ ಕಥೆ ನಮಗೆ ಆಧಾರ ಇತ್ಯಾದಿ ಜಿಜ್ಞಾಸೆ ಬೇಡ. ಕಥೆ ಕಥೆಯಾಗಿಯೇ ಇರಲಿ. ಭಕ್ತಿಗೆ ಪ್ರಾಧಾನ್ಯತೆಯಿರಲಿ. ನಮ್ಮ ಮನೆಯಲ್ಲಿ ಹೇಗೆ ಆಚರಣೆಯಲ್ಲಿದೆಯೋ ಹಾಗೇ ನಡೆದು ಕೊಳ್ಳೋಣ, ಆಚರಿಸೋಣ.

ಜಾಗರಣೆಯ ಬಗ್ಗೆ, ಸಮುದ್ರ ಮಥನ, ಲುಬ್ಢಕನ ಕಥೆ, ಚಿತ್ರಭಾನುವಿನ ಕಥೆ ಪೂರಕವಾಗಿದೆ ಅನ್ನಿಸುತ್ತದೆ. ಸಮುದ್ರ ಮಥನ ದಲ್ಲಿ, ಹಾಲಾಹಲ ವಿಷವೂ ಹೊರಹೊಮ್ಮಿತೆಂದೂ, ಅದನ್ನು ಈಶ್ವರನು ಸೇವಿಸಿದನೆಂದೂ ಆ ಸಂದರ್ಭದಲ್ಲಿ ಪಾರ್ವತಿಯು ಬಂದು ಅದು ಹೊಟ್ಟೆಗೆ ಸೇರದಂತೆ ಕತ್ತಿನಲ್ಲೇ ನಿಲ್ಲುವಂತೆ ತಡೆ ಹಿಡಿದಳೆಂದು ಕಥೆ. ಆದರೆ ಯಾವುದೇ ವಿಷ ಪ್ರಾಶನ ಪ್ರಕರಣದಲ್ಲಿ ವ್ಯಕ್ತಿಯು ನಿದ್ರಿಸಬಾರದು, ನಿದ್ರೆಗೊಳಗಾಗಬಾರದು ಎಂದು ಚಿಕಿತ್ಸಾ ವಿಧಾನ ದಲ್ಲಿ ಹೇಳುತ್ತಾರೆ. ಹಾಗಾಗಿ ಆ ದಿನ ರಾತ್ರಿ ಶಿವನನ್ನು ನಿದ್ರೆಗೆ ಜಾರದಂತೆ ಸ್ತುತಿಸುತ್ತಾ, ದೇವಾದಿ ದೇವತೆ ಗಳೆಲ್ಲರೂ ಸೇರಿದಂತೆ ಉಪವಾಸವಿದ್ದು ಜಾಗರಣೆ ಮಾಡಿದರೆಂದು ಹೇಳಲಾಗುತ್ತದೆ. ಆ ಹಾಲಾಹಲದಿಂದ ವಿಶ್ವವನ್ನೇ ರಕ್ಷಿಸಿದ ಶಿವನನ್ನು ಸ್ತುತಿಸುತ್ತಾ, ಉಪವಾಸ ವ್ರತಾದಿಗಳನ್ನು ಆಚರಿಸುತ್ತಾ ಶಿವನಿಗೆ ಕೃತಜ್ಞರಾಗಿರುವ ಸಂಕೇತವೇ ಮಹಾ ಶಿವರಾತ್ರಿಯೆಂದು ಪರಿಗಣಿಸಲಾಗುತ್ತದೆ.

ಲುಬ್ಢಕನ ಕಥೆ, ಚಿತ್ರಭಾನುವಿನ ಕಥೆಯೂ ಜಾಗರಣೆಗೆ ಪ್ರಾಮುಖ್ಯತೆಯನ್ನು ತೋರಿಸುತ್ತಾ ಬಿಲ್ವ ಪತ್ರೆಯ ಶ್ರೇಷ್ಠತೆಯನ್ನು ಹೇಳುತ್ತದೆ. ಸಾಮಾನ್ಯವಾಗಿ, ದೇವಾಲಯಗಳಲ್ಲಿ, ಏಕಾದಶ ರುದ್ರಾಭಿಷೇಕ ನಂತರದಲ್ಲಿ, ರುದ್ರತ್ರಿಶತಿ, ಶಿವ ಸಹಸ್ರನಾಮ, ಅಷ್ಟೋತ್ತರ ಶತನಾಮ ಇತ್ಯಾದಿ ಪೂಜೆಗಳು ನಡೆಯುತ್ತವೆ.
ಇದಕ್ಕೆ ಸರಿ ಸುಮಾರು 6 ಆರು ಗಂಟೆಗಳು ಬೇಕಾಗುತ್ತದೆ – ಅಲ್ಲಿಗೆ ಒಂದು ಯಾಮದ ಪೂಜೆ. ಇದು ನಾಲ್ಕೂ ಯಾಮಗಳಲ್ಲೂ ನಡೆಯುತ್ತದೆ. ಹೀಗೆ ದಿನಪೂರ್ತಿ ಪೂಜೆ ಕೈಂಕರ್ಯ ಸಾಂಗವಾಗಿ ನಡೆಸಲಾಗುವುದು. ಆ ದಿನ ಜಾಗರಣಾನಂತರ, ಮಾರನೆಯದಿನ ಏಕಾವಾರ ರುದ್ರಾಭಿಷೇಕ ಪೂಜೆಮಾಡಿ ನಂತರದಲ್ಲಿ ಪಾರಣೆ. ಹಾಗೆಯೇ ಹಗಲು ನಿದ್ದೆ ನಿಷಿದ್ಧ.

ಇನ್ನೊಂದು, ಈ ದಿನ ಪರಶಿವನು, ಎಲ್ಲ ಶಿವಲಿಂಗಗಳಲ್ಲೂ ಸನ್ನಿಹಿತನಾಗಿ ಪೂಜೆಗೈದ ಎಲ್ಲರಿಗೂ ಪಾಪ ಪರಿಹಾರವಾಗುವುದು, ಸಕಲೇಷ್ಟಾರ್ಥಗಳನ್ನೂ ಪಡೆಯಬಹುದು ಎಂಬುದೂ ಒಂದು ನಂಬಿಕೆ ಮತ್ತು ಇದು ಪುರಾಣೋಕ್ತ ವೆಂದೂ ಹೇಳುತ್ತಾರೆ. ನಾವು ಮಾಡಿದ ತಪ್ಪೋ,ಪಾಪವೋ ಹೇಗೆ ಅರಿಕೆ ಮಾಡಿಕೊಳ್ಳಬಹುದು ಅಂತ ಶ್ರೀ ಶ್ರೀ ಶಂಕರಾಚಾರ್ಯರ, ಕೆಲವು ಸ್ತೋತ್ರಗಳು, ಮತ್ತೊಂದು ಸ್ತೋತ್ರ (ಶಿವಕವಚ – ಋಷಭ ಋಷಿ ವಿರಚಿತ) ಮನದಲ್ಲಿ ಹಾದು ಹೋಯ್ತು.

ಶಿವ ಮಾನಸ ಪೂಜೆ (Shiva Manassas Pooje) ಯಲ್ಲಿ ಶ್ರೀ ಶ್ರೀ ಶಂಕರಾಚಾರ್ಯರು (Sri Sri ShankaraAcharya AdiShankara) ನಾವು ಶಿವನಲ್ಲಿ ನಮ್ಮನ್ನು ನಾವು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಅಲ್ಲವೇ! (ಎಲ್ಲ ಶ್ಲೋಕಗಳೂ ಮನನ ಯೋಗ್ಯವಾಗಿದೆ. ನಾನು ಇಲ್ಲಿ 2ನ್ನು ಮಾತ್ರ ಹೇಳಿದೀನಿ).

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ ಪೂಜಾ ತೇ ವಿಷಯೋಪಭೋಗ-ರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||4||

(ನಾನು ಅರ್ಥೈಸಿಕೊಂಡಂತೆ) – ನೀನೇ ನನ್ನ ಆತ್ಮ, ಪಾರ್ವತಿಯೇ ಧೀ ಶಕ್ತಿ (ಮತಿ), ನನ್ನ (ಪಂಚ) ಪ್ರಾಣಗಳು ನಿನ್ನ ಸೇವಕರು (ಸಹಚರರು), ನನ್ನ ದೇಹವೇ ನಿನ್ನ ಮನೆ, ನನ್ನ ಇಂದ್ರೀಯ ಇಂದ್ರಿಯಾಸಕ್ತಿ / ವಿಷಯಾಸಕ್ತಿ ಎಲ್ಲವೂ ನಿನ್ನ ಪೂಜೆಯೇ, ನಿದ್ರಾವಸ್ಥೆ ನಿನ್ನ ನಿರ್ವಿಕಲ್ಪ ತನ್ಮಯ ಸ್ಥಿತಿ, ನಡಿಗೆ, ಸಂಚಾರವೆಲ್ಲವೂ ನಿನಗೆ ಪ್ರದಕ್ಷಿಣೆ, ನಾವಾಡುವ ಮಾತೆಲ್ಲವೂ ನಿನ್ನಯ ಸ್ತೋತ್ರವೇ, ಮಾಡುವ ಕೆಲಸ ಕಾರ್ಯಗಳೆಲ್ಲವೂ ನಿನ್ನಯ ಆರಾಧನೆ . .

ಹಾಗೆಯೇ . . . 5 ನೇ ಶ್ಲೋಕವನ್ನೂ ನೋಡಿ . ನಾವು (ಗೊತ್ತಿಲ್ಲದೇ) ಮಾಡಿರಬಹುದಾದ, ಮಾಡಬಹುದಾದ ತಪ್ಪು ಗಳನ್ನೆಲ್ಲಾ ಕರುಣಾಮಯಿ ಶಿವನಲ್ಲಿ ಅರಿಕೆ ಮಾಡಿ ಕ್ಸಮಿಸು ಎಂದು ಹೇಗೆ ಕೇಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ. (ಹಾಗಂತ ತಪ್ಪುಗಳನ್ನು ಮಾಡ್ತಾ, ಕ್ಷಮಿಸು ಅಂತ ಕೇಳೋದಲ್ಲ, ಗೊತ್ತಿದ್ದೂ, ತಪ್ಪು ಮಾಡಿದ್ರೆ ಖಂಡಿತಾ ನಾವು ಕ್ಷಮಾರ್ಹ ರಾಗೋದಿಲ್ಲ).

ಕರಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ . || 5 ||
ನನ್ನ ಕೈಗಳಿಂದ, ಕಾಲುಗಳಿಂದ, ಮಾತಿನಿಂದ, ಶರೀರದಿಂದ, ಕಣ್ಣುಗಳಿಂದ, ಕಿವಿಗಳಿಂದ, ಅಥವಾ ಮನಸ್ಸಿನಿಂದ ಸಂಭವಿಸಿರಬಹುದಾದ ಯಾವುದೇ ರೀತಿಯಲ್ಲಿ ಮಾಡಬೇಕಾದ್ದು ಅಥವಾ ಮಾಡದಿರುವ ಅಥವಾ ಮಾಡಬಾರದ್ದನ್ನು ಮಾಡಿರುವ ಯಾವುದೇ ತಪ್ಪುಗಳು ಉಂಟಾಗಿದ್ದಲ್ಲಿ ಅವನ್ನು ಮನ್ನಿಸಿ ನನ್ನ ಮೇಲೆ ಕೃಪೆ ತೋರು. ಹೇ ಮಹಾದೇವನೇ, ಕರುಣಾಸಾಗರನೇ ನಿನಗೆ ಜಯ ಜಯ !

ಮತ್ತೊಂದು ಸ್ತೋತ್ರ (ಶಿವಕವಚ – ಋಷಭ ಋಷಿ ವಿರಚಿತ) ಜ್ಞಾಪಕಕ್ಕೆ ಬರ್ತಿದೆ – ತುಂಬಾ ಚೆನ್ನಾಗಿದೆ ಪೂರಾ ಸಮಯ ಸಿಕ್ಕಾಗ ಓದಿ).

ನಮ್ಮನ್ನು ಯಾವುದೆಲ್ಲದರಿಂದ ಕಾಪಾಡಬೇಕು ಎಂದು ಬಿನ್ನವಿಸಿಕೊಳ್ಳುವ ಸ್ತೋತ್ರವಿದು.

ದುಃ ಸ್ವಪ್ನ ದುಃ ಶಕುನ ದುರ್ಗತಿ ದೌರ್ಮನಸ್ಯ- ದುರ್ಭಿಕ್ಷ ದುರ್ವ್ಯಸನ ದುಃಸಹ ದುರ್ಯಶಾಂಸಿ | ಉತ್ಪಾತತಾಪವಿಷಭೀತಿಮಸದ್ಗ್ರಹಾರ್ತಿಂ ವ್ಯಾಧೀಂಶ್ಚ ನಾಶಯತು ಮೇ ಜಗತಾಮಧೀಶಃ ||
ಓಂ ನಮೋ ಭಗವತೇ ಸದಾಶಿವಾಯ

ಜಗದೀಶನಾದ ಶಿವನೇ – ನಮ್ಮನ್ನು ಈ ಎಲ್ಲವುಗಳಿಂದ ಕಾಪಾಡು – ದುಃಸ್ವಪ್ನ, ದುಃಶಕುನ, ದುರ್ದೆಶೆ, ದುರ್ನಡತೆ, ಕುಖ್ಯಾತಿ, ಅಸಹನೀಯ ಕ್ಷಾಮ, ಕ್ಷುದ್ರಗ್ರಹಗಳಿಂದ , ವಿಷಗ್ರಾಹ್ಯ, ಗ್ರಹಗತಿಗಳಿಂದ ಹಾಗೂ ವ್ಯಾಧಿ ಗಳಿಂದ (ನಮ್ಮನ್ನು ರಕ್ಷಿಸು).

(ಅರ್ಥ ನನಗೆ ತಿಳಿದಂತೆ ತಪ್ಪು ಒಪ್ಪುಗಳಿರಬಹುದು).

ಹೀಗೆ, ಆ ಮಹಾ ಮಹಿಮ ಶಿವನನ್ನು ಪ್ರಾರ್ಥಿಸುತ್ತಾ, ಆ ಮಹಾ ಮಹಿಮ ಮಹಾ ಶಿವನ ಅನುಗ್ರಹವು ಎಲ್ಲರಿಗೂ ದೊರೆಯಲಿ ಎಂದು ಆಶಿಸುತ್ತಾ, ಎಲ್ಲರಿಗೂ ಶುಭ ಕೋರೋಣ.

ಶುಭಾಶಯಗಳೊಂದಿಗೆ,
ರ‌ತ್ನಾ, ರಾಮಮೂರ್ತಿ.

*********************************