BhagavadGita’s Pointers to Beat Bias

What is Discrimination? Discrimination is the unfair or prejudicial treatment of people and groups based on characteristics such as race, religion, caste, gender, age, physical / mental disability, social status, sexual orientation etc.

What’s the Cause? A person’s upbringing may cause them to become prejudiced. If parents had prejudices of their own, there is a chance that these opinions will be passed on to the next generation. One bad experience with a person from a particular group can cause a person to think of all people from that group in the same way.

Discrimination can be direct / indirect or active / passive.

When we are all created equal by the Divine force, why do we surround ourselves with layers of misinformed identities and view the world through the discriminatory lenses?!

(NOTE: This blog post is part of a series; please refer to BhagavadGita, The Solution Provider to access the complete series.)

Let us now see what Lord SriKrishna tells us about how to beat such biased views and live in harmony in the following article by respected Sri. RamaMurthy.


ಓಂ ಶ್ರೀಕೃಷ್ಣ ಪರಮಾತ್ಮನೇ ನಮಃ

  • DISCRIMINATED (ಭೇಧ ಭಾವ/ ತಾರತಮ್ಯ/ವ್ಯತ್ಯಾಸ)
    ಅಧ್ಯಾಯ – 5 (ಕರ್ಮ ಸನ್ಯಾಸಯೋಗ) ಶ್ಲೋ.18 & 19
    ಅಧ್ಯಾಯ – 6 (ಆತ್ಮ ಸಂಯಮ ಯೋಗ) ಶ್ಲೋ.32
  • ಅಧ್ಯಾಯ – 9 (ರಾಜವಿದ್ಯಾ ರಾಜ ಗುಹ್ಯ ಯೋಗ) ಶ್ಲೋ.29

ಮಾನವ ಸ್ವಭಾವ ಯಾವತ್ತ್ತು change ಆಗೋಲ್ಲ ಅನ್ನೋ ಮಾತೊಂದಿದೆ. ಸಹನೆ ಅನ್ನೋದು ವಜ್ರ ಕವಚ, ತಾಳ್ಮೆ ಅನ್ನೋದು ನಮ್ಮಲ್ಲಿ ಯಾವಾಗಲೂ ಸಮನ್ವಯ ವಾಗಿರಬೇಕು ತಾಳ್ಮೆ ಎಲ್ಲದರಲ್ಲೂ ಇರ್ಬೇಕು ಅಂತೆಲ್ಲಾ ಹೇಳ್ತೀವಿ. ರಾಮಾಯಣ, ಮಹಾಭಾರತ, ಭಗವದ್ಗೀತೆ ಎಲ್ಲಾವುದರಲ್ಲೂ ಇದನ್ನ ಪ್ರತಿಧ್ವನಿಸುತ್ತೆ. ನಮ್ಮಲ್ಲಿ ಈ ‘ವಜ್ರಕವಚ’ ವಿದೆಯೇ, ತಾಳ್ಮೆ, ಸಹನೆ ಎಷ್ಟಿದೆ ನಮಗೆ ನಾವೇ ತೀರ್ಪುಗಾರರು. ಆರನೇ ಅಧ್ಯಾಯದಲ್ಲಿ ‘ಪ್ರಶಾಂತ ಮನಸಂ ಹ್ಯೇನo ಯೋಗಿನಂ ಸುಖಮುತ್ತಮಂ . . .’ ಅಂತ ಹೇಳಿದೆ.
ಧರ್ಮರಾಜ ಕೂಡ ಒಂದುಸಲ ತಾಳ್ಮೆ ಕಳ್ಕೋತಾನೆ ಅಂತ ಹೇಳ್ತಾರೆ. – ಮಹಾಭಾರತದ ಒಂದು ಸನ್ನಿವೇಶ ನಾನು ಕೇಳಿದ್ದು (ನಾನು ಓದಿದ್ದಲ್ಲ) – ಯುದ್ಧ ಶುರುವಾಗಿದೆ, ಯುದ್ಧದಲ್ಲಿ ಧರ್ಮರಾಯ ನ್ನ ಕರ್ಣ ಘಾಸಿ ಗೊಳಿಸಿದ್ದಾನೆ. ಅರ್ಜುನ ಅಲ್ಲಿಗೆ ಬರ್ತಾನೆ. ಅವ್ನ ನೋವು, ಬೇನೆ ಕಾರಣವೋ ಗೊತ್ತಿಲ್ಲ. ತಾಳ್ಮೆ ಗೆಡ್ತಾನೆ. ಅರ್ಜುನಾ ನಿನ್ನ ಗಾಂಢೀವ ನಿಷ್ಪ್ರಯೋಜಕ ವಾಗಿಹೋಯ್ತಲ್ಲಾ ಅಂದ್ಬಿಡ್ತಾನೆ. ಅರ್ಜುನಂಗೆ ಸಿಟ್ಟು ಬಂದ್ಬಿಡುತ್ತೆ. ಅಲ್ದೇ ಅವನದ್ದೊಂದು ಶಪಥ ಇರುತ್ತೆ. ಯಾರು ತನ್ನ ಗಾಂಢೀವವನ್ನು ಹೀಗಳಿಸಿದ್ರೆ ಅವ್ರನ್ನ ಕೊಂದು ಹಾಕ್ತೀನಿ ಅಂತ. ಅರ್ಜುನ ಅವನೂ ತಾಳ್ಮೆಕಳ್ಕೊಂಡ. ಕತ್ತಿ ಹಿಡ್ಕೊಂಡು ಅಣ್ಣನ್ನ ಕೊಂದೇ ಬಿಡ್ತೀನಿ ಅಂತ ಹೊರಟ, ಅಲ್ಲೇ ಶ್ರೀ ಕೃಷ್ಣ ಇದ್ದ ಪರ್ವಾಗಿಲ್ಲ. ಇನ್ನೂ ಯುದ್ಧ ಮುಗ್ದಿಲ್ಲ ಏನಾರು ಉಪಾಯ ಮಾಡ್ಬೇಕಲ್ಲ. ತಕ್ಷಣ ಎದ್ದು – ಅರ್ಜುನಾ ಏನ್ಮಾಡ್ತಿದೀಯಾ ಅಣ್ಣನ್ನೇ ಕೊಲ್ಲೋದುಂಟಾ ನಿಲ್ಸು ಅಂತಾನೆ. ಅರ್ಜುನ ತನ್ನ ಮಾಮೂಲಿ ವರಸೆಯಲ್ಲಿ ನನ್ನ ಶಪಥ ಮುಖ್ಯ ನಾನು ಸುಮ್ನಿರೋಕೆ ಆಗೋಲ್ಲ ಅಂತಾನೆ. ನಿಲ್ಲಪ್ಪ, ಇದಕ್ಕೂ ಒಂದು solution ಇದೆ ಅಂತಾ ಹೇಳ್ತಾ ನೋಡು ‘ಹಿರಿಯರನ್ನ ಗೌರವಿಸ್ದೆ, ಬೈದ್ರೆ’ – ಅವ್ರನ್ನ ಕೊಂದ ಹಾಗೆ. ನೀನು ನಿಮ್ಮಣ್ಣನ್ನ ಬೈದು ಬಿಡು. ನಿನ್ನ ಶಪಥ ಈಡೇರಿದ ಹಾಗೂ ಆಯ್ತು, ಶಪಥಾನು ಉಳ್ಕೊಂಡ್ತು ಅಂತಾನೆ. ಅರ್ಜುನ ಅಣ್ಣನ್ನ ಚೆನ್ನಾಗಿ ಬೈತಾನೆ. ಇಲ್ಲಿಗೆ ಮುಗೀತು ಅನ್ಕೋ ಬೇಡಿ, ಅರ್ಜುನ ಶುರು ಮಾಡ್ಕೋತಾನೆ, ಅಣ್ಣ ತಂದೆ ಸಮಾನ ಅವ್ನನ್ನ ಕೊಂದ ಪಾಪ ನನಗೆ ಬಂತು. ನಾನು ನನ್ನನ್ನೇ ಕೊಂದುಕೋ ಬೇಕು ಅಂತ ಹೊರಡ್ತಾನೆ. ಅಲ್ಲೇ ಇದ್ದ ಕೃಷ್ಣ ನಿಲ್ಸಪ್ಪ ಅದಕ್ಕೂ ಪರಿಹಾರ ಇದೆ – ನಿನ್ನನ್ನ ನೀನು ಹೊಗಳ್ಕೊಂಡ್ರೆ, ನಿನ್ನನ್ನ ನೀನು ಕೊಂದುಕೊಂಡ ಹಾಗೆ ಅಂತ ಹೇಳ್ತಾನೆ. ಇಷ್ಟೇ ಸಾಕಿತ್ತೇನೋ ಅರ್ಜುನoಗೆ, ತನ್ನ ಶೂರತ್ವ, ವೀರತ್ವ ತನ್ನ ಗಾಂಡೀವವನ್ನ ಹೋಗಳ್ಕೊಳೋಕೆ ಶುರುಮಾಡ್ತಾನೆ. ಇದಕ್ಕೇ ಏನೋ ಕೃಷ್ನೋಪಾಯ ಅನ್ನೋದು.
ಇರಲಿ, ದೊಡ್ಡವರನ್ನ ಬೆಯ್ಯ ಬಾರದು, ಗೌರವ ಕೊಡಬೇಕು, ತನ್ನನ್ನ ತಾನು ಹೊಗಳ್ಕೋ ಬಾರ್ದು ಅನ್ನೋ ಪಾಠವಂತೂ ಇದರಲ್ಲಿ ಇದೆ. ಅನುಸರಿಸಲು ಪ್ರಯತ್ನ ಪಡೋಣ.
ಹಾಗೆಯೇ, ಶ್ಲೋಕಗಳ ಕಡೆ ಗಮನ ಹರಿಸೋಣ.
ಹಳೆಯ ನೆನಪೊಂದು ಬರ್ತಿದೆ. ಹೇಳಿಬಿಡ್ತೀನಿ.
ನಾವು college ನಲ್ಲಿ ಓದ್ತಿ ದ್ದಾಗ (೧೯೬೫- ೬೮), ನಮ್ಮ ಸಂಸ್ಕೃತ ಪ್ರಾಧ್ಯಾಪಕರು ಪೂಜ್ಯ. ಮಹೇಶ್ವರಯ್ಯ ಅಂತ ಇದ್ರು . ಅವರ ಮೊದಲನೇ class ನಲ್ಲಿ ಎಲ್ಲರ introduction ಇರ್ತಿತ್ತು. ಅವತ್ತು ಅವ್ರು “ಅರಿವೇ ಗುರು, ಆಚಾರವೇ ಶಿಷ್ಯ . . .” ಅಂತ ಹೇಳಿದ್ರು. ಅವ್ರು ನಮಗೆ ಪಾಠ ಮಾಡುವಾಗ ಕೂಡ ಸಂದರ್ಭೋಚಿತವಾಗಿ ಕೆಲವು ವಚನಗಳನ್ನ ಹೇಳ್ತಿದ್ರು, ವಿವರಿಸ್ತಿದ್ರು. ಇವತ್ತು ಭಗವದ್ಗೀತೆಯ ಶ್ಲೋಕಗಳ ಮೇಲೆ ಕಣ್ಣು ಹಾಯಿಸ್ತಿದ್ದಾಗ ಯಾಕೊ ಅದು ಜ್ಞಾಪಕಕ್ಕೆ ಬಂತು. ಇದು ಈ ಶ್ಲೋಕಗಳಿಗೆ ಮತ್ತು ಈ ಅಧ್ಯಾಯಕ್ಕೆ ಸ್ವಲ್ಪ ಪೂರಕವಾಗಿದೆ ಅನ್ನಿಸ್ತಿತ್ತು. ಪೂರಾ ವಚನ ಜ್ಞಾಪಕಕ್ಕೆ ಬರ್ಲಿಲ್ಲ. ಸ್ವಲ್ಪ ಅಂತರ್ಜಾಲದಲ್ಲಿ ತಡಕಾಡಿದ್ಮೇಲೆ ಸಿಗ್ತು. ಯಾಕೋ ‘ಹಾವಿನಹಾಳ ಕಲ್ಲಯ್ಯನ’ ವಚನಗಳು, ಬೇರೆ ವಚನಗಳಷ್ಟು ಪ್ರಚುರದಲ್ಲಿಲ್ವೇನೋ ಅನ್ಸುತ್ತೆ. ‘ಅರಿವೇ ಗುರು’ ಇದನ್ನ ಘೋಷ ವಾಕ್ಯದಂತೆ ಉಪಯೋಗಿಸೋದುಂಟು ಆದರೆ ಕಲ್ಲಯ್ಯನ್ನ ಮರ್ತಿದಾರ ಅನ್ಸುತ್ತೆ. ಅದೇ ‘ ಕಾಯಕವೇ ಕೈಲಾಸ’ ಅಂದಾಗ ಬಸವೇಶ್ವರರನ್ನು ನೆನಪಿಗೆ ತರ್ತಾರೆ. ಎರಡೂ ಸೇರಿ ‘ಅರಿವೆಗುರು, ಕಾಯಕವೇ ಕೈಲಾಸ’ ತುಂಬಾ ಪ್ರಖ್ಯಾತ ಘೋಷ ವಾಕ್ಯ. ನನಗೆ ತಿಳಿದಂತೆ ಸ್ವಲ್ಪ ಅರ್ಥ ಹೇಳಕ್ಕೆ ಪ್ರಯತ್ನ ಪಟ್ಟಿದ್ದೀನಿ. – ಮೊದಲಿಗೆ ವಚನವನ್ನು ನೋಡಿ.

ಅರಿವೇ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು.
ಅರಿವೇ (ಜ್ಞಾನ) ಗುರು, ಅದನ್ನ ಆಚರಣೆಗೆ ತರುವವನೇ (ಮನಸ್ಸು ಅಂತ ಹೇಳ್ಬಹುದು) ಶಿಷ್ಯ. ಜ್ಞಾನ ಮತ್ತು ಆಚರಣೆಗೆ ಲಿಂಗ ಜ್ಞಾನ ರೂಪ. ಪರಿಣಾಮ ಅಂದ್ರೆ ಜ್ಞಾನವನ್ನು ಆಚರಣೆಗೆ ತಂದಾಗ ಅದು ತಪಸ್ಸು. ಇವೆಲ್ಲದರ ಸಮನ್ವಯ ಮತ್ತು ಯೋಗ ವಾದಾಗ (- ಮನಸ್ಸಿನ ನಿಗ್ರಹ , ಧ್ಯಾನಸ್ಥನಾಗೋದು, ಆತ್ಮ ಪರಮಾತ್ಮ ರಲ್ಲಿ ಒಂದಾಗೋದು) ಸಮತೆ. (ಇದನ್ನ ಲಿಂಗಾಂಗ ಸಾಮರಸ್ಯ ಅಂತ ಕರೆಯೋದೂ ಇದೆ).
ಇದನ್ನ ಅರಿಯದೆ, ವೇಷವ ಧರಿಸಿ ( ಕಾವಿಬಟ್ಟೆ, ರುದ್ರಾಕ್ಷಿ ಮಾಲೆ, ವಿಭೂತಿ ಧರಿಸಿ ) ತಲೆ ಬೋಳಾಗಿಸಿ ಕೊಂಡ್ರೆ ಕಲ್ಲೇಶ್ವರ ನಗಲ್ವೇ ಅಂತ ಹೇಳ್ತಾನೆ. ಅರ್ಥಗರ್ಭಿತವಾಗಿದೆ ಅಲ್ವ-
ಭಗವದ್ಗೀತೆಯ ಈ ಶ್ಲೋಕಗಳ ಕಡೆ ಗಮನ ಹರಿಸೋಣ –

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥ 5.18 ॥

विद्याविनयसम्पन्ने ब्राह्मणे गवि हस्तिनि |
शुनि चैव श्वपाके च पण्डिता: समदर्शिन: ||5.18||

vidyā-vinaya-sampanne brāhmaṇe gavi hastini
śhuni chaiva śhva-pāke cha paṇḍitāḥ sama-darśhinaḥ ||5.18||

The truly learned, with the eyes of divine knowledge, see with equal vision a Brahmin, a cow, an elephant, a dog, and a dog-eater.


(–ನಿಜವಾದ ಪಂಡಿತ/ಜ್ಞಾನಿಯು ವಿದ್ಯಾವಿನಯಸಂಪನ್ನ ಬ್ರಾಹ್ಮಣವರ್ಣ, ಹಸು (ಗವಿ), ಆನೆ, ನಾಯಿ, ನಾಯಿಯ ಮಾಂಸ ತಿನ್ನುವನಲ್ಲೂ ಕೂಡಾ ಏಕರೂಪನಾದ ಭಗವಂತನನ್ನು ಕಾಣಬಲ್ಲ.).
ಇದರ ಅರ್ಥ ಏನು? – ಏನೆಲ್ಲಾ ಹೇಳಿದೆ.
ಭಗವಂತನ ದೃಷ್ಟಿಯಿಂದ ನೋಡುವುದಾದರೆ, ಜೀವ ಜಢ ರೂಪಗಳೆಲ್ಲವೂ ಪರಮಾತ್ಮ ಸ್ವರೂಪಪ, ಎಲ್ಲದರಲ್ಲೂ ಅವನಲ್ಲಿದ್ದಾನೆ ಅಥವಾ ಎಲ್ಲವೂ ಅವನಲ್ಲಿದೆ ಅಂತಾದರೆ, ಅವನಲ್ಲಿ ಯಾವುದರಲ್ಲು ಭೇಧ ಭಾವವಿಲ್ಲ, ಜ್ಞಾನಿಯಾದವನೂ ಇದನ್ನೇ ಅನುಸರಿಸಬೇಕಲ್ಲವೇ?. ಸಮದರ್ಶಿತ್ವವನ್ನು ನಾವು ಬೆಳೆಸಿಕೊಳ್ಳಬೇಕು.
ಡಿ.ವಿ.ಜಿ. ಯವರು ಈ ಶ್ಲೋಕದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. ಯಾವ ಮನುಷ್ಯ ಎಲ್ಲದರಲ್ಲೂ ಒಂದೇ ತರಹದ ಪ್ರಜ್ಞೆ, /ಭೇಧ ಭಾವವಿಲ್ಲವೋ ಒಂದೇ ತರಹ ನೋಡುತ್ತಾನೋ ಅವನು ಸಮದರ್ಶಿ. ಸಮತೆ, ಸಮತ್ವ ಅಂದ್ರೆ ಏನು? ದರ್ಶಕನ ಸಮದರ್ಶತ್ವದಿಂದ ದೃಷ್ಟನಿಗೆ ಹಿತವಾಗಬೇಕು, ಹಿತ ಚಿಂತನೆ,ಉಪಕಾರ ದೃಷ್ಟಿ ಮುಖ್ಯ. ಸಮತೆ ಅಂತ ಆನೆಗೂ, ನಾಯಿಗೂ ಒಂದೇ ಆಹಾರ ಕೊಡಕ್ಕೆ ಆಗುತ್ಯೇ ಅಂತಾರೆ. ಜ್ಞಾನದ ಲಕ್ಷಣವೇ ಸಮದರ್ಶನ. ಅವನಿಗೆ ಯಾರಲ್ಲೂ ದ್ವೇಷವಿಲ್ಲ, ಎಲ್ಲರಲ್ಲೂ ಸಮಾನ ಪ್ರೀತಿ, ಎಲ್ಲರ ಹಿತ ಚಿಂತನೆ ಮಾಡ್ತಿರ್ತಾನೆ.
ಇದನ್ನೇ ಮುಂದಿನ ಶ್ಲೋಕ ದಲ್ಲಿ ಸಮತ್ವದ ಬಗ್ಗೆ ಇನ್ನೊಂದು ರೀತಿ ಹೇಳಿದೆ.

ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥ 5.19 ॥

इहैव तैर्जित: सर्गो येषां साम्ये स्थितं मन: |
निर्दोषं हि समं ब्रह्म तस्माद् ब्रह्मणि ते स्थिता: ||5. 19||

ihaiva tair jitaḥ sargo yeṣhāṁ sāmye sthitaṁ manaḥ
nirdoṣhaṁ hi samaṁ brahma tasmād brahmaṇi te sthitāḥ ||5.19||

Those whose minds are established in equality of vision conquer the cycle of birth and death in this very life. They possess the flawless qualities of God, and are therefore seated in the Absolute Truth.


(–ಭಗವಂತನ ಏಕ ರೂಪತೆಯಲ್ಲಿ ಯಾರ ಮನಸ್ಸು ಸ್ಥಿರ ವಾಗಿದ್ದು ಸಮಭಾವದಲ್ಲಿ ನೆಲಸಿರುತ್ತದೋ ಅವನು, ಜನನ ಮರಣಗಳನ್ನು ಗೆದ್ದಿರುವನಾಗಿ ಪರಬ್ರಹ್ಮನಂತೆ ದೋಷರಹಿತನಾಗಿ ಪರಬ್ರಹ್ಮನಲ್ಲೇ ನೆಲಸಿದವನಾಗಿರುತ್ತಾನೆ).
ಇದು ಆತ್ಮ ಸಾಕ್ಷಾತ್ಕಾರದ ಕಡೆಗೆ ತೋರಿಸುವ ದಾರಿ. ನಾವು ನಮ್ಮನ್ನು ದೇಹದಿಂದ ಗುರುತಿಸಿಕೊಳ್ಳುವ ಬದಲು, ಭಗವದ್ಸ್ವರೂಪಿ ಆತ್ಮನೊಂದಿಗೆ ಗುರುತಿಸಿಕೊಳ್ಳ ಬೇಕು. ಯಾರ ಮನಸ್ಸು ಬ್ರಹ್ಮಸರ್ವತ್ರ ಸಮಾನವಾದ ಸಮಕ್ಷತೆಯಲ್ಲಿ (ಭಗವಂತನಲ್ಲಿ) ನಿಂತಿರುತ್ತದೋ ಅವರು ‘ಇಹೈವ’ – ಈ ಲೋಕದಲ್ಲಿಯೇ ಮೋಕ್ಷ ಪಡೆದವ ರಾಗಿರುತ್ತ‌ರೆ. ಮುಂದಿನ ಶ್ಲೋಕಗಳಲ್ಲಿ ಸಮದರ್ಶಿತ್ವದ ಬಗ್ಗೆ ವಿವರಣೆ ಇದೆ. ಈ ಅಧ್ಯಾಯದ ಎಲ್ಲಾ ಶ್ಲೋಕಗಳೂ ಮನನ ಯೋಗ್ಯ.

ಅಧ್ಯಾಯ – 6 (ಆತ್ಮ ಸಂಯಮ ಯೋಗ) ಶ್ಲೋ.32
ಮೊದಲಿಗೆ ಈ ಅಧ್ಯಾಯದ ಬಗ್ಗೆ ಸ್ವಲ್ಪ ಹೇಳೋಣ ಅನ್ಸುತ್ತೆ.
ಮೊದಲಿಗೆ – ನಮ್ಮ ಆತ್ಮೋದ್ಧಾರವನ್ನು ನಾವೇ ಮಾಡ್ಕೋಬೇಕು – ಉದ್ಧರೇದಾತ್ಮನಾತ್ಮಾನಂ ನಾತ್ಮಾನಮಾವಸಾದಯೇತ್ . . . ಅಂತ ಈ ಅಧ್ಯಾಯದ 5 ನೇ ಶ್ಲೋಕದಲ್ಲಿ ಹೇಳಿದೆ. ಅಂದ್ರೆ ಈಗ ಮಾಡ ತಕ್ಕದ್ದನ್ನ ಸತ್ಕಾರ್ಯವೆಂದು ಭಾವಿಸುತ್ತಾ ಸರಿಯಾಗೇ ಮಾಡಬೇಕು.
ನಾವು ಧ್ಯಾನ, ಪೂಜೆ ಅಂತೆಲ್ಲಾ ಕೂತ್ಕೋತೀವಿ ಆದ್ರೆ, ನಮಗೆ ಏಕಾಗ್ರತೆ ಅನ್ನೋದು ಬರೋದೇ ಇಲ್ವೇ. ದೇವರ ಮುಂದೆ ಪೂಜೆ, ಧ್ಯಾನ ಅಂತ ಕೂತ್ಕೊಂಡ್ರೆ, ಆವಾಗ್ಲೇ ನಮಗೆ ಎಲ್ಲಿಲ್ಲದ ಚಿಂತೆ, ಯೋಚ್ನೆ ಶುರು ಆಗೋದು. ಎಲ್ರಿಗೂ ಹಾಗೆ ಅಲ್ದೇ ಇದ್ರೂ, ಸಾಮಾನ್ಯವಾಗಿ ಎಲ್ಲರಿಗೂ ಇದರ ಅನುಭವವಾಗಿರಬಹುದು. ಮುಂದೆ, ಅರ್ಜುನನೇ ನಮ್ಮ ಪ್ರಶ್ನೆ ಅನ್ನೋಹಾಗೆ ಕೇಳ್ತಾನೆ ಚಂಚಲಂ ಹಿ ಮನಃ ಕೃಷ್ಣ . . . ಮನಸ್ಸು ತುಂಬಾ ಚಂಚಲ . . . ಏಕಾಗ್ರತೆ ಸಾಧಿಸೋದು ಕಷ್ಟ ಸಾಧ್ಯ ಅಂತಾನೆ. ಚಂಚಲ ಮನಸ್ಸನ್ನು ಧ್ಯಾನದಿಂದ ಹೇಗೆ ಹೋಗಲಾಡಿಸಿಕೊಳ್ಳಬಹುದು ಅಂತ ಹೇಳ್ತಾ, ಧ್ಯಾನ ಹೇಗೆ ಮಾಡ್ಬೇಕು ಅನ್ನೋ ವಿವರಣೆ ಕೊಡ್ತಾ ಮುಂದೆ 10 – 12 ಶ್ಲೋಕಗಳಲ್ಲಿ ವಿವರಣೆ ಕೊಡ್ತಾ ಹೋಗುತ್ತೆ. ಈ ಧ್ಯಾನ ಸಾಧನೆಗೆ ನಾವು ಮಾಡುವ ಊಟ (ಯುಕ್ತಾಹಾರ), ವಿಹಾರ (ನಮ್ಮ ಓಡಾಟ), ನಿದ್ರೆ ಇವುಗಳು ನಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮ ಆಗ ಶ್ರೀ ಕೃಷ್ಣ ಹೇಳಿದ್ದು ಇವತ್ತಿಗೂ ಸತ್ಯಅನ್ಸುತ್ತೆ. ಈಗ ಕಾಣುತ್ತಿರುವ obesity ಅಂತ ಏನು ಹೇಳ್ತೀವೋ ಅದಕ್ಕೆ ಉತ್ತರ ರೂಪವಾಗಿದೆ ಆರನೆಯ ಅಧ್ಯಾಯದಲ್ಲಿ ಬರುವ ಈ ಎರಡು ಶ್ಲೋಕಗಳು (ಶ್ಲೋಕ 16-17). ಇವು ನಮ್ಮ ಸ್ವಸ್ಥ ಆರೋಗ್ಯ ಕಾಪಾಡಿಕೋಳ್ಳಲು ಮಾರ್ಗದರ್ಶಿಯೂ ಹೌದು. .
ನಾತ್ಯಶ್ನಸ್ತು ಯೋಗೋಸ್ತಿ ನಚೈಕಾಂತಮನಶ್ನತಃ |
ನ ಚಾತಿ ಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ || 16 I I
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋಭವತಿ ದುಃಖಹಾ || 17 II
ಅತಿಯಾಗಿ ಊಟಮಾಡುವವನು, ಏನೂ ಊಟ ಮಾಡದೇ ಇರುವವನು, ಅತಿಯಾಗಿ ನಿದ್ರೆಮಾಡುವವನು , ನಿದ್ರೆ ಇಲ್ಲದೇ ಇರುವವನಿಗೆ ಧ್ಯಾನಯೋಗ ಸಾಧ್ಯವಿಲ್ಲ.
ಯುಕ್ತ ಆಹಾರ ವಿಹಾರದಲ್ಲಿ (ದೈಹಿಕ ಚಟುವಟಿಕೆಯಲ್ಲಿ) ಕರ್ಮದಲ್ಲಿ ತೊಡಗಿದವನು, ಅವಶ್ಯಕವಾದಷ್ಟು ನಿದ್ರೆ ಹಾಗೂ ಎಚ್ಚರವನ್ನು ಕಾಪಾಡಿಕೊಂಡು ಬರುವವನು ಧ್ಯಾನಯೋಗದಿಂದ ದು:ಖಗಳಿಂದ ದೂರನಾಗುತ್ತಾನೆ.
ಹಾಗೆಯೇ ನಾವು ಯಾವ ಜಾಗದಲ್ಲಿ ಹೇಗೆ ಕೂತ್ಕೋ ಬೇಕು, ಉಸಿರಾಟ, ಪ್ರಾಣಾಯಾಮ ದಬಗ್ಗೆ ವಿವರಿಸ್ತಾ ಹೋಗುತ್ತೆ.
ಪ್ರತಿಯೊಂದು ಶ್ಲೋಕವೂ ಅರ್ಥಪೂರ್ಣ. ಓದ್ತಾ ಓದ್ತಾ ನಮ್ಮ ನಿತ್ಯಜೀವನಕ್ಕೆ ನಮ್ಮ ಭಾವಕ್ಕೆ ಅರ್ಥೈಸಿಕೊಳ್ಳುತ್ತಾ ಹೋಗಬಹುದಾದ ಅರ್ಥಗರ್ಭಿತವಾದ ಅಧ್ಯಾಯ. (ಇದರ ಬಗ್ಗೆ ಬುದ್ಧನ ಜ್ಞಾನೋದಯ ಕಂಡುಕೊಳ್ಳುವಾಗಿನ ಸ್ಥಿತಿ, ಅವನ ಮೊದಲ ಉಪದೇಶ ಜ್ಞಾಪಕಕ್ಕೆ ಬರ್ತಿದೆ. ಮತ್ತೆ ಬೇರೆ ಯಾವುದಾದರೂ ಸಂದರ್ಭದಲ್ಲಿ ನೋಡೋಣ).

ನಾವು ಈಗ ನೋಡ ಬೇಕಾಗಿರುವ ಶ್ಲೋಕದ ಕಡೆ ಗಮನ ಹರಿಸೋಣ –
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋSರ್ಜುನ
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥ 32 ॥
(ಅರ್ಜುನ, ಎಲ್ಲ ಜೀವಿಗಳನ್ನೂ ತನ್ನೊಡನೆ ಹೋಲಿಸಿಕೊಂಡು ಅವರ ಸುಖ ದುಃಖ ಗಳಲ್ಲಿ ಸಮಾನವಾಗಿ ಕಾಣುತ್ತಾನೋ ಅವನೇ ಪರಿಪೂರ್ಣ ಯೋಗಿ.
ಅರ್ಜುನಾ–ಸುಖವಿರಲಿ, ,ದುಃಖವಿರಲಿ, ಎಲ್ಲರ ಬೇಕು-ಬೇಡಗಳನ್ನು ತನ್ನ ಹಾಗೆಯೇ ಸಮಾನತೆಯಿಂದ ಕಾಣುವವನು, ಬಹಳ ದೊಡ್ಡ ಸಾಧಕ ).

ಈ ಶ್ಲೋಕದ ಪೂರ ಭಾವಾರ್ಥ ತಿಳ್ಕೊಳೋದಕ್ಕೆ ಹಿಂದಿನ ಎರಡು ಶ್ಲೋಕಗಳನ್ನೂ ಗಮನದಲ್ಲಿಟ್ಕೋಬೇಕು. ಸಫಲನಾದ ಧ್ಯಾನಿಯ ಲಕ್ಷಣಗಳನ್ನ ಇಲ್ಲಿ ಹೇಳಿದೆ.
ಹಿಂದಿನ ಅಧ್ಯಾಯದಲ್ಲೂ ಸಮದರ್ಶಿತ್ವದ ಬಗ್ಗೆ ಹೇಳಿದೆ. ಸಮದರ್ಶಿತ್ವ/ಸಮಾನತೆಯನ್ನ ಯಾವರೀತಿ ಬೆಳೆಸಿಕೊಳ್ಳಬಹುದು ಅನ್ನುವ ವಿವರಣೆ ನಮಗೆ ಇಲ್ಲಿ ಸಿಗ್ತಾ ಹೋಗುತ್ತೆ.
ಸಮಸ್ತ ಪ್ರಾಣಿಗಳಲ್ಲೂ ಭಗವದ್ವಸ್ತುವನ್ನು ಕಾಣುತ್ತಾ , ಯೋಗಿ ಅಥವಾ ಸಾಧಕನಾದವನು ತನ್ನಂತೆಯೇ ಇನ್ನೊಬ್ಬರು ಎಂದು ತಿಳಿದಿರುತ್ತಾನೆ. ನಮಗೆ ಯಾವುದು ದುಃಖವಾಗುತ್ತದೋ ಅದು ಇನ್ನೊಬ್ಬರಿಗೂ ದುಃಖವನ್ನು ಕೊಡುತ್ತದೆ ಎನ್ನುವ ಸತ್ಯ ಎಲ್ಲರಿಗೂ ಸುಖ-ದುಃಖಗಳಿವೆ. ಅವರ ಸುಖ,ದುಃಖ,ನೋವನ್ನು ತನ್ನದಂತೇ ಕಾಣುತ್ತಾ,ಇನ್ನೊಬ್ಬರ ಸಂತೋಷವನ್ನು- ಯಶಸ್ಸನ್ನು ತನ್ನ ಯಶಸ್ಸೆಂದು ತಿಳಿದು ಖುಷಿ ಪಡುತ್ತಾನೋ- ಅವನು ಸಮದರ್ಶಿ, ಯೋಗಿ ಆಗಿರ್ತಾನೆ.

ಅಧ್ಯಾಯ – 9 (ರಾಜವಿದ್ಯಾ ರಾಜ ಗುಹ್ಯ ಯೋಗ) ಶ್ಲೋ.29
ಈ ಅಧ್ಯಾಯದ ಬಗ್ಗೆ ಸ್ವಲ್ಪ ಹೇಳೋದರೆ, ನಾವು ದೇವರನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟವಾದಂತಹ ಅರಿವಿನ ಮಟ್ಟವಿರುತ್ತದೆ. ಎಲ್ಲರೂ ಒಂದೇ ರೀತಿ ತಿಳಿದುಕೊಳ್ಳಲು ಆಗಲ್ಲ. ಅವರವರ ಮಟ್ಟಕ್ಕೆ ತಕ್ಕಂತೆ ಭಗವಂತನನ್ನು ಅರಿಯುವುದು ಜ್ಞಾನ. ಹೀಗೆ ಭಗವಂತನ ಅನುಸಂಧಾನ ಮಾಡುವುದು ವಿಜ್ಞಾನ. ಹೀಗೆ ಅನುಸಂಧಾನ ಮಾಡುವುದರಿಂದ ಭಗವಂತನ ಸತ್ಯದ ದರ್ಶನ, ಸಾಕ್ಷಾತ್ಕಾರದೆಡೆಗೆ ದಾರಿ. ಚಿಂತನ ಮಂಥನಕ್ಕೊಳಪಡುವಂಥಾ ಈ ಶ್ಲೋಕಗಳೆಲ್ಲಾ ಈ ಅಧ್ಯಾಯದ ಕೊಡುಗೆ –
ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ . . .
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ . . .
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ . . . .
ಈ ಶ್ಲೋಕವನ್ನು ನೋಡಿ –
ಸಮೋSಹಂ ಸರ್ವಭೂತೇಷು ನ ಮೇ ದ್ವೇಷ್ಯೋSಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥29॥
-ಎಲ್ಲಾ ಜೀವಿಗಳೂ ನನಗೆ ಒಂದೆ. ನನಗೆ ದ್ವೇಷವೂ ಇಲ್ಲ ಪ್ರೀತಿಯೂ ಇಲ್ಲ. . ಆದರೆ ಯಾರು ನನ್ನನ್ನು ಭಕ್ತಿಯಿಂದ ಭಜಿಸು\ತ್ತಾರೋ ಅವರು ನನ್ನ ವಶ; ನಾನು ಅವರ ವಶ.

ಭಗವಂತನಿಗೆ ಯಾರ ಮೇಲೂ ಹಗೆಯಾಗಲೀ ಅಥವಾ ಗೆಳೆತನವಾಗಲೀ ಇಲ್ಲ. ಆತ ಪ್ರೀತಿಸುವುದು ವ್ಯಕ್ತಿಯನ್ನಲ್ಲ ಬದಲಿಗೆ ವ್ಯಕ್ತಿಯಲ್ಲಿರುವ ಜ್ಞಾನವನ್ನು ಮತ್ತು ಭಕ್ತಿಯನ್ನು. ಅರ್ಹತೆ ಇದ್ದವರು ಭಗವಂತನನ್ನು ಭಕ್ತಿಯಿಂದ ಸಾಕ್ಷಾತ್ಕಾರಗಳಿಸಿಕೊಳ್ಳಬಹುದು.

ನಾವು ಮಾಡುವ ದಿನ ನಿತ್ಯದ ಕೆಲಸಗಳೆಲ್ಲವೂ ಭಗವಂತನ ಆರಾಧನೆ ಎಂದು ಭಾವಿಸಿ, ನಮ್ಮ ಒಲವನ್ನು ಭಗವಂತನ ಸಕ್ಷಾತ್ಕಾರದ ಕಡೆ ತಿರುಗಿಸಲು ಸ್ವಲ್ಪ ಪ್ರಯತ್ನ ಹಾಕೋಣ. ಭಗವದ್ಗೀತೆ ಓದಿದ ತಕ್ಷಣ ಸಾಕ್ಷಾತ್ಕಾರ ವಾಗಿ ಬಿಡುತ್ತೆ ಆನ್ಕೊಳೋದು ಬೇಡ, ಮನನ ಮಾಡ್ತಾ, ಸ್ವಲ್ಪ ಸ್ವಲ್ಪವಾಗಿಯೇ ಹಿಂದಿನ ಅಧ್ಯಾಯದಲ್ಲಿ (ಶ್ಲೋ. ೮ ಅಭ್ಯಾಸ ಯೋಗೇನ . ), ಹೇಳಿರುವಂತೆ ಸ್ವಲ್ಪ ಸ್ವಲ್ಪವಾಗಿಯೇ ಅಭ್ಯಾಸದಲ್ಲಿ ತೊಡಗಿಸಿಕೊಳ್ಳೋಣ.
ಓಂ ಶ್ರೀಕೃಷ್ಣ ಪರಮಾತ್ಮನೇ ನಮಃ .
–* =೦೦೦=–

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s